ಬಂಗಾರದ ವ್ಯಾಪಾರಿಯ ಸಹೋದರನ ಕೊಲೆಗೈದ ಪರಿಚಿತ ಆಭರಣ ತಯಾರಕ

ದಾವಣಗೆರೆ, ಫೆ.25 – ಬಂಗಾರದ ಒಡವೆಯನ್ನು ತಯಾರಿಸದ ಕಾರಣ ಬಂಗಾರ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಒಡವೆ ನೀಡಿದ್ದ ಪರಿಚಿತ ಬಂಗಾರದ ವ್ಯಾಪಾರಿಯ ಸಹೋದರನಿಗೆ ಸೋಡಾದಲ್ಲಿ ಸೈನೈಡ್ ಹಾಕಿ ಕೊಲೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಇಲ್ಲಿನ ಬಡಾವಣೆ ಪೊಲೀಸರು, ಆರೋಪಿ ಆಭರಣ ತಯಾರಕನನ್ನು ಬಂಧಿಸಿದ್ದಾರೆ. 

ವಿನೋಬ ನಗರದ ಮಂಜುನಾಥ ಚಿತ್ರ ಗಾರ ಅಲಿಯಾಸ್ ಪಿಂಟು (30) ಬಂಧಿತನು. ವಿನೋಬ ನಗರದ ದರ್ಶನ್ ರಾಯ್ಕರ್ ಅವರು ತಮಗೆ ಪರಿಚಯವಿದ್ದ ಬಂಧಿತ ಆರೋಪಿ ಪಿಂಟುಗೆ ಚಿನ್ನದ ಒಡವೆಗಳನ್ನು ಮಾಡಿ ಕೊಡುವಂತೆ ಇದೇ ಜನವರಿ 4 ರಂದು 110 ಗ್ರಾಂ ಬಂಗಾರವನ್ನು ಕೊಟ್ಟಿದ್ದರು. ಆದರೆ, ಆತ ಒಡವೆಗಳನ್ನು ಕೊಟ್ಟಿರಲಿಲ್ಲ. 

ಕೊನೆಗೆ ಮಂಜುನಾಥ ಚಿತ್ರಗಾರನ ಮನೆಗೆ ದರ್ಶನ್ ರಾಯ್ಕರ್ ಹೋಗಿ ಒಡವೆಗಳನ್ನು ಕೊಡುವಂತೆ ಕೇಳಿದ್ದು, ಆಗ ಆರೋಪಿತನು ತನಗೆ ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಹೋಗಿ ತಂದು ಕೊಡುವುದಾಗಿ ಹೇಳಿದ್ದಾನೆ. 

ಇದರಿಂದ ಅನುಮಾನಗೊಂಡ ದರ್ಶನ್ ರಾಯ್ಕರ್ ಅವರ ಸಹೋದರ ಅರ್ಜುನ್ ರಾಯ್ಕರ್ ಬಂಧಿತ ಪಿಂಟು ಜೊತೆಗೆ ಬೈಕಿನಲ್ಲಿ ಹೋಗಿದ್ದು, ಪುನಃ ಮನೆ ಹತ್ತಿರ ಬಂದಿದ್ದಾರೆ. ಈ ವೇಳೆ ಅರ್ಜುನ್ ರಾಯ್ಕರ್‌ಗೆ ಜೀರಾ ಸೋಡಾ ಕೊಟ್ಟು ಇದನ್ನು ಕುಡಿಯುತ್ತಿರು ಮನೆಗೆ ಹೋಗಿ ಒಡವೆ ತರುತ್ತೇನೆ ಎಂದು ಆರೋಪಿ ಪಿಂಟು ಹೇಳಿ ಹೋಗಿದ್ದಾನೆ. 

ಅರ್ಜುನ್ ಅವರು ಜೀರಾ ಸೋಡಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅರ್ಜುನ್ ಸಾವನ್ನಪ್ಪಿದ್ದರು. 

ಅರ್ಜುನ್ ಸಾವಿನ ಬಗ್ಗೆ ಸಹೋದರ ದರ್ಶನ್ ರಾಯ್ಕರ್ ಅನುಮಾನ ವ್ಯಕ್ತಪಡಿಸಿ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮೃತನ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ, ಜೀರಾ ಸೋಡಾದಲ್ಲಿ ಸೈನೈಡ್ ಎಂಬ ವಿಷದ ಅಂಶವಿರುವುದು ಸ್ಪಷ್ಟವಾಗಿದೆ. ಕೂಡಲೇ ಆರೋಪಿತ ಪಿಂಟು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಎಎಸ್ಪಿ ರಾಮಗೊಂಡ ಬಿ. ಬಸರಗಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಬಡಾವಣೆ ಠಾಣೆ ನಿರೀಕ್ಷಕ ಬಿ. ಮಂಜುನಾಥ, ಸಿಬ್ಬಂದಿಗಳಾದ ಪಿ. ಹರೀಶ್, ಅಂಜಿನಪ್ಪ ಪೂಜಾರ, ಕೆ.ಬಿ. ಹರೀಶ್, ಎನ್.ಟಿ. ಸಿದ್ದೇಶ್, ಸೈಯದ್ ಅಲಿ, ಸಿ. ಹನುಮಂತಪ್ಪ, ಬಸವರಾಜ ಜಂಜೂರ್, ರಾಮಾಂಜನೇಯ ಕೊಂಡಿ ತಂಡ ಪ್ರಕರಣವನ್ನು ಪತ್ತೆ ಹಚ್ಚಿದೆ.