ಸ್ನೇಹಿತನ ಕೊಲೆ : ಅಪರಾಧಿಗೆ ಶಿಕ್ಷೆ

ದಾವಣಗೆರೆ, ಜ.24- ಬೈದಿದ್ದಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಆತ್ಮೀಯ ಗೆಳೆಯನಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ 6 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ನಗರದ ಹೊಂಡದ ವೃತ್ತದ ಸಂತೋಷ್ (25) ಗೆಳೆಯನನ್ನೇ ಹತ್ಯೆ ಮಾಡಿ ಶಿಕ್ಷೆಗೆ ಗುರಿಯಾದ ಆರೋಪಿ. ಮೃತ ಎನ್. ಕುಮಾರ್ ಹಾಗೂ ಆರೋಪಿ ಸಂತೋಷ್ ಇಬ್ಬರು ಸ್ನೇಹಿತರಾಗಿದ್ದರು. ಕಳೆದ ಮೇ 15, 2019ರಂದು ಮದ್ಯಪಾನ ಮಾಡಿ ಈ ಇಬ್ಬರೂ ಬರುತ್ತಿರುವಾಗ ಸಂತೋಷ್ ಗೆ ಕುಮಾರ್ ಬೈದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಸಂತೋಷ್ ಕುಮಾರ್ ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. 

ಬಳಿಕ ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಸಂತೋಷ್ ಗೆ ನ್ಯಾಯಾಧೀಶರಾದ ಜೆ.ವಿ. ವಿಜಯಾನಂದ ಅವರು ಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಕೊಡಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 3 ತಿಂಗಳು ಸಜೆ, 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಿದ್ದು, ದಂಡ ಕೊಡದಿದ್ದಲ್ಲಿ 1 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ.  ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡಿಸಿದ್ದರು.