ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ರೈಲು ಡಿಕ್ಕಿ : ಸ್ಥಳದಲ್ಲೇ ಬಾಲಕ ಸಾವು

ದಾವಣಗೆರೆ, ಜ.23- ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ಗೆ ನಿಂತ ಬಾಲಕನೋರ್ವ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಡಿಸಿಎಂ ಟೌನ್ ಶಿಪ್ ಬಳಿ ಇಂದು ಸಂಜೆ ನಡೆದಿದೆ.

ನಗರದ ಭಗತ್ ಸಿಂಗ್ ನಗರದ 3 ಮೇನ್, 12 ನೇ ಕ್ರಾಸ್ ನ ಡೇವಿಡ್ ಅವರ ಮಗ ಸಚಿನ್ ಡೇವಿಡ್ (15) ಮೃತಪಟ್ಟ ಬಾಲಕ. ಇಂದು ಭಾನುವಾರವಾದ್ದರಿಂದ ಸಂಜೆ ಸ್ನೇಹಿತರ ಜೊತೆಗೂಡಿ ಫೋಟೋ ಶೂಟ್ ಗೆ ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಹಳಿಯತ್ತ ಹೋಗಿದ್ದರು. 

ಬೇರೆ ಹಳಿ ಮೇಲೆ ರೈಲು ಹೋಗಲಿದ್ದು, ಆ ಸಮಯದಲ್ಲಿ ಹಿಂದೆ ಒಳ್ಳೆಯ ಬ್ಯಾಕ್‌ಗ್ರೌಂಡ್ ಸಿಗುತ್ತದೆ ಎಂದು ಬಾಲಕ‌ ರೈಲ್ವೇ ಹಳಿ ಮೇಲೆ ಪೋಸ್ ನೀಡುತ್ತಾ ನಿಂತಿದ್ದ. ಈ ಸಂದರ್ಭದಲ್ಲಿ ಬಾಲಕ ನಿಂತಿದ್ದ ಹಳಿ ಮಾರ್ಗದಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. 

ಸೆಲ್ಫಿ ತೆಗೆಯುವ ಗುಂಗಿನಲ್ಲಿದ್ದ ಈ ಬಾಲಕನಿಗೆ ಇದ್ದ ಎರಡು ಜೋಡಿ ಹಳಿಯಲ್ಲಿ ರೈಲು ಯಾವ ಹಳಿ ಮೇಲೆ ಬರುತ್ತಿದೆ ಎಂದು ಗಮನಿಸದಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. 

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.