ಕೆರೆಗೆ ಉರುಳಿದ ಕಾರು : ಪ್ರಾಣಾಪಾಯದಿಂದ ಪಾರು

ದಾವಣಗೆರೆ, ಜ.19- ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದು ಮೂವರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿಗೆ ಸಮೀಪದ ಬಾತಿ ಕೆರೆಯಲ್ಲಿ ಇಂದು ನಡೆದಿದೆ.

ಹರಿಹರದ ಕಡೆಯಿಂದ ದಾವಣಗೆರೆಗೆ ಬಾತಿ ಕೆರೆ ಮಾರ್ಗವಾಗಿ ಕಾರು ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ.  ಕಾರಿನಲ್ಲಿ ಚಾಲಕ ಸೇರಿದಂತೆ ಮೂರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಕಾರು ಕೆರೆಗೆ ಬೀಳುತ್ತಿದ್ದಂತೆ ಪಕ್ಕಕ್ಕೆ ಜಿಗಿದು, ಕಾರು ಚಾಲಕ ಹಾಗೂ ಮತ್ತೋರ್ವ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. 

ಎದುರಿಗೆ ಬಂದ ಬಸ್‌ಗೆ ದಾರಿ ಬಿಡಲು ಹೋಗಿ ಕಾರು ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ಇಲ್ಲಿನ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ, ಕೆರೆಯಲ್ಲಿ ಬಿದ್ದ ಕಾರನ್ನು ಕ್ರೇನ್ ಬಳಸಿ ಹೊರ ತೆಗೆದಿದ್ದಾರೆ. 

ಕಾರು ಕೆರೆಗೆ ಬಿದ್ದಿದ್ದನ್ನು ಮತ್ತು ಹೊರಗೆ ತೆಗೆಯುವುದನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಈ ವೇಳೆ ವಾಹನ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿತ್ತು. ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.