ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರ ಸೂಚನೆ

ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರ ಸೂಚನೆ

ಜಗಳೂರು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆ : ಸಿಗ್ನಲ್ ಲೈಟ್, ಸಿಸಿ ಕ್ಯಾಮೆರಾಕ್ಕೆ ಅನುದಾನದ ಭರವಸೆ

ಜಗಳೂರು, ಜ.12-  ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಸ್.ವಿ. ರಾಮಚಂದ್ರ, ಪಟ್ಟಣದ ಎರಡು ವೃತ್ತಗಳಲ್ಲಿ  ಸಿಗ್ನಲ್ ಲೈಟ್ಸ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲು ಅನುದಾನ ನೀಡುವುದಾಗಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸಾಮಾಜಿಕ ಅರಣ್ಯ, ವಲಯ ಅರಣ್ಯ ಹಾಗೂ ಕೊಂಡುಕುರಿ ವನ್ಯಧಾಮ  ಸೇರಿ ಮೂರು ಜನ ಅರಣ್ಯ ಅಧಿಕಾರಿಗಳಿದ್ದರೂ ತಾಲೂಕಿನಲ್ಲಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡಿಲ್ಲ. ರಸ್ತೆ ಬದಿ ಗಿಡಗಳು ಹಾಳಾಗುತ್ತಿವೆ. ರೈತರಿಗೂ ಸಹ ಗುಣಮಟ್ಟದ ಸಸ್ಯಗಳನ್ನು ನೀಡುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

 ತಾಲ್ಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಂದ ಅರಣ್ಯ ಪ್ರದೇಶದಲ್ಲಿ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಅರಣ್ಯ ಜಮೀನನ್ನು ಇಲಾಖೆಗೆ ನೀಡಬೇಕಾಗಿರುತ್ತದೆ ಮತ್ತು ಅರಣ್ಯ ಅಭಿವೃದ್ಧಿಯನ್ನು ಮಾಡಬೇಕಾಗಿರುತ್ತದೆ. ಈ ಕಾರ್ಯವನ್ನು  ಯಾವುದೇ ಕಂಪನಿಯವರು ಮಾಡಿಲ್ಲ. ತಕ್ಷಣವೇ ಕಂಪನಿಯವರಿಗೆ ನೋಟಿಸ್ ಜಾರಿ ಮಾಡಿ ಕ್ರಮಕೈಗೊಳ್ಳಬೇಕೆಂದು ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಅವರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರಪ್ಪ ಪ್ರಗತಿ ವರದಿ ನೀಡಿದಾಗ, ತಾಲ್ಲೂಕಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಸುವ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ್ ಪಿಡಿಓಗಳು ಸೇರಿದಂತೆ ತಾಲೂಕಿನ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ದಾಸ್ತಾನಿರಬೇಕು. ವಿಶೇಷ ವಾರ್ಡ್ ಸಜ್ಜುಗೊಳಿಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯ ಕೈಗೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಹಾಗೂ  ಆಡಳಿತ ವೈದ್ಯಾಧಿಕಾರಿ ಡಾ.ನೀರಜ್ ಅವರಿಗೆ ಶಾಸಕರು ಆದೇಶಿಸಿದರು.

ತಾಲ್ಲೂಕಿನಲ್ಲಿ ಈವರೆಗೆ 32 ಕೋರನ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 12 ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಎರಡನೇ ಡೋಸ್  ಲಸಿಕೆ ನೀಡುವ ಪ್ರಮಾಣ ಶೇಕಡ 80ರಷ್ಟು ಪ್ರಗತಿಯಾಗಿದ್ದು, ಶಾಲಾ ಮಕ್ಕಳಿಗೆ ನೀಡುವ ಲಸಿಕೆಯ ಪ್ರಗತಿ ಶೇಕಡ 58ರಷ್ಟು ಆಗಿದೆ ಎಂದು  ತಾಲ್ಲೂಕು ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದರು.

ಗ್ರಾಮೀಣ ನೀರು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಾಧಿಕ್ ಉಲ್ಲಾ ಪ್ರಗತಿ ವರದಿ ನೀಡುತ್ತಾ, ತಾಲ್ಲೂಕಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿ 22 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದ 77 ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿಗೆ ಸರ್ವೇ ಕಾರ್ಯ ಮುಗಿದಿದ್ದು 5 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗುವುದು. ಜಲ ಮೂಲವಿಲ್ಲದ ಇತರ 69 ಹಳ್ಳಿಗಳಿಗೆ ಭದ್ರಾ ನದಿಯಿಂದ ನೀರು ಪೂರೈಸುವ ಯೋಜನೆ ಇದಾಗಿದೆ  ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಿಆರ್‌ಇಡಿ ಎಇಇ ಶಿವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ, ಬೆಸ್ಕಾಂ ಎಇಇ ಗಿರೀಶ್ ನಾಯಕ್ ಮುಂತಾದ ಅನುಷ್ಠಾನ ಅಧಿಕಾರಿಗಳು ಪ್ರಗತಿ ವರದಿ ನೀಡಿದರು. 

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ಲಕ್ಷ್ಮಿಪತಿ, ತಹಸೀಲ್ದಾರ್ ಸಂತೋಷ್ ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕರಾದ ಶ್ರೀಮತಿ ನಜ್ಮಾ, ವೃತ್ತನಿರೀಕ್ಷಕ ಮಂಜುನಾಥ ಪಂಡಿತ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.