ಮುಂದಿನ ಚುನಾವಣೆಯ ಸ್ಪರ್ಧೆಗೆ ಪಕ್ಷದ ತೀರ್ಮಾನಕ್ಕೆ ಬದ್ಧ

ದಾವಣಗೆರೆ, ಡಿ.14- ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ನೀಡುವ ಬಗ್ಗೆ ಬಿಜೆಪಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವು ದಾಗಿ ಹೇಳುವ ಮೂಲಕ ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಪರೋಕ್ಷ ವಾಗಿ ಸ್ಪರ್ಧೆಗೆ ಸಿದ್ಧ ಎಂಬುದನ್ನು ಹೊರಹಾಕಿದರು.

ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದು, ಅವರ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೀರೇಶ್, ಈ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವುದಾಗಿ ತಿಳಿಸಿದರು.

ಸೈನಿಕ ಪಾರ್ಕ್ ನಿರ್ಮಾಣಕ್ಕೆ ಕಾರ್ಯಪ್ರವೃತ್ತ: ನಗರದಲ್ಲಿ ನಗರ ಪಾಲಿಕೆಯಿಂದ ಸೈನಿಕ ಪಾರ್ಕ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ನಾವುಗಳು ಅಧಿಕಾರಕ್ಕೆ ಬಂದಾಗ ಸೈನಿಕರ ಸ್ಮಾರಕ ಮತ್ತು ಸೈನಿಕರ ಪಾರ್ಕ್ ನಿರ್ಮಾಣ ಮಾಡಬೇಕು ಎಂಬ ಕನಸಿತ್ತು. ಅದರಲ್ಲಿ ಈಗ ಸೈನಿಕರ ಸ್ಮಾರಕ ಮಾಡಲಾಗಿದೆ. ಇನ್ನೊಂದು ಸೈನಿಕರ ಪಾರ್ಕ್‍ಗೆ ಯೋಜನೆ ರೂಪಿಸಲಾಗುತ್ತಿದೆ. ನಗರದ ಲೋಕಿಕೆರೆ ರಸ್ತೆಯಲ್ಲಿ ಸುಮಾರು ಆರೂವರೆ ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. 

ಸೈನ್ಯಕ್ಕೆ ಸೇರಿರುವ ಯುವಕರಿಗೆ ಪ್ರೇರಣೆ ಆಗಬೇಕು ಎಂಬ ಉದ್ದೇಶದಿಂದ ಇಂತಹ ಯೋಜನೆಯೊಂದು ರೂಪಿಸುತ್ತಿದ್ದು, ಸೈನ್ಯದಲ್ಲಿ ಬಳಸುವ ಟ್ಯಾಂಕರ್, ಹೆಲಿ ಕ್ಯಾಪ್ಟರ್‍ನಂತಹ ಯುದ್ಧ ಉಪಕರಣಗಳನ್ನು ಇಡುವ ಹೆಬ್ಬಯಕೆ ಹೊಂದಿದ್ದೇವೆ. ಎರಡು ಆಡಿಟೋರಿಯಂ, ಸೈನಿಕರ ಸಾಹಸಗಳನ್ನು ಪ್ರತಿಬಿಂಬಿಸುವ ಕಲೆಗಳು ಇದರಲ್ಲಿ ಇರಬೇಕು ಎಂಬ ಆಶಯವಿದೆ ಎಂದರು.