ಬೆಳೆ ಪರಿಹಾರ ಅರ್ಜಿ ಸ್ವೀಕಾರ : ಅವಧಿ ವಿಸ್ತರಿಸಿ

ಬೆಳೆ ಪರಿಹಾರ ಅರ್ಜಿ ಸ್ವೀಕಾರ : ಅವಧಿ ವಿಸ್ತರಿಸಿ

ರಾಣೇಬೆನ್ನೂರು, ನ.25- ಬೆಳೆ ಪರಿ ಹಾರದ ಅರ್ಜಿ ಸ್ವೀಕರಿಸುವ ಅವಧಿಯನ್ನು ಡಿಸೆಂಬರ್ 15 ರ ವರೆಗೆ ಮುಂದುವರೆಸಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಮತ್ತು ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದ ಪ್ರತಿ ಎಕರೆಗೆ 10 ಸಾವಿರ ರೂ.ಪರಿಹಾರ ಎರಡನ್ನೂ ಸೇರಿಸಿ ರೈತರಿಗೆ ವಿತರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ  ಅವರು ರಾಣೇಬೆನ್ನೂರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಮಳೆ ನೀರಿನಿಂದ ಮನೆಗಳು ಜಲಾವೃತ ವಾಗಿ ರೈತರಿಗೆ ದಾಖಲಾತಿಗಳು ಸಿಗುತ್ತಿಲ್ಲ. ವಿದ್ಯುತ್ ಅಡಚಣೆ ಉಂಟಾಗಿ ಗ್ರಾಮೀಣ ಭಾಗದಲ್ಲಿ ಪಹಣಿ ಪತ್ರಿಕೆಗಳು ಸಿಗುತ್ತಿಲ್ಲ. ಪಹಣಿ ಪತ್ರಿಕೆ ಸಿಕ್ಕರೆ ಸರ್ವರ್ ಸಮಸ್ಯೆ ಎದುರಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅರ್ಜಿ ದಿನಾಂಕ ವಿಸ್ತರಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. 

 ಈ ಸಂದರ್ಭದಲ್ಲಿ ರೈತ ಮುಖಂಡರಾದ ಚಂದ್ರಪ್ಪ ಬೇಡರ, ಬಸವರಾಜ ಕೊಂಗಿಯವರ, ಗದಿಗೆಪ್ಪ ಹೊಸಳ್ಳಿ, ಹರಿಹರಗೌಡ ಪಾಟೀಲ, ಜಗದೀಶ ಕೆರೂಡಿ ,ಇಕ್ಬಾಲ್‌ಸಾಬ್‌ ರಾಣೇಬೆನ್ನೂರು, ಶಿವಪ್ಪ ಬಡಕರಿಯಪ್ಪನವರ, ಪ್ರದೀಪ್ಪ ಅಕ್ಕೇರ ಮುಂತಾದವರು ಹಾಜರಿದ್ದರು.