ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ : ಗಂಭೀರ ಗಾಯ

ದಾವಣಗೆರೆ, ನ.25- ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸ್ಥಳೀಯ ಬಾಷಾ ನಗರದಲ್ಲಿ ನಡೆದಿದೆ.  ಬಾಷಾ ನಗರದ 3 ಕ್ರಾಸ್‌ನ ಇರ್ಫಾನ್ ಹಾಗೂ ರೇಶ್ಮಾ ದಂಪತಿ ಪುತ್ರ   ಸಾಧಿಕ್ ಗಾಯಗೊಂಡ ಬಾಲಕ. ಸಂಜೆ ಮನೆ ಬಳಿಯಲ್ಲಿ ಆಟವಾಡುತ್ತಿದ್ಧಾಗ ಏಳೆಂಟು ನಾಯಿಗಳು ಬಾಲಕನ ಮೇಲೆ ಏಕಾಏಕಿ ದಾಳಿ ನಡೆಸಿವೆ. ಈ ವೇಳೆ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಬಾಲಕನ ಕಣ್ಣು, ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ. ಬಾಲಕನನ್ನು  ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ನಾಯಿಗಳನ್ನು ನಿಯಂತ್ರಿಸುವಲ್ಲಿ ನಗರ ಪಾಲಿಕೆ ವಿಫಲವಾಗಿದ್ದು, ಮಗುವಿನ ಚಿಕಿತ್ಸೆಯ ಹೊಣೆಯನ್ನು ಪಾಲಿಕೆಯೇ ಹೊತ್ತುಕೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಆರೋಗ್ಯ ಇಲಾಖೆ ನಿರ್ಲಕ್ಷ : ನಾಯಿ, ಹಂದಿ ಹಾವಳಿ ಹೆಚ್ಚಳ

ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿರುವ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಮಹಾನಗರ ಪಾಲಿಕೆ ಆಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸ್ವಚ್ಛತೆಯಲ್ಲಿ ದಾವಣಗೆರೆ ನಗರ 4ನೇ ಸ್ಥಾನ ಬಂದಿದೆ ಎಂದು ಪಾಲಿಕೆ ಮಹಾಪೌರರು, ಆಯುಕ್ತರು ಹೇಳುತ್ತಾರೆ. ಆದರೆ, ಹಳೇ ಭಾಗದ ವಾರ್ಡ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಲಿ. ಅಲ್ಲಿನ ಸ್ವಚ್ಛತೆ ಹೇಗಿದೆ ಎಂಬುದನ್ನು ನೋಡಲಿ ಎಂದು ಅವರು ಹೇಳಿದ್ದಾರೆ. 

9ನೇ ವಾರ್ಡ್ ಸೇರಿದಂತೆ, ಹಳೇ ಊರಿನಲ್ಲಿ  ಪೌರ ಕಾರ್ಮಿಕರಿಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ-ರಾಶಿ ಇದ್ದು, ಚರಂಡಿಗಳು ತುಂಬಿಕೊಂಡಿವೆ. ಚರಂಡಿ ಸ್ವಚ್ಛ ಮಾಡದೇ ತಿಂಗಳು ಗಟ್ಟಲೆ ಆಗಿದ್ದು, ಹೇಗೆ 4ನೇ ಸ್ಥಾನ ಬಂದಿದೆ ಎಂದು ತಿಳಿಯುತ್ತಿಲ್ಲ ಎಂದು ನಾಗರಾಜ್ ಜರಿದಿದ್ದಾರೆ.

ಮತ್ತೆ ನಾಯಿಗಳ ಕಾಟ ಹೇಳ ತೀರದು. ಪ್ರತಿದಿನ ನಾಯಿಗಳಿಂದ ಮಕ್ಕಳು, ದೊಡ್ಡವರು ಕಚ್ಚಿಸಿಕೊಂಡು ದಿನೇ ದಿನೇ ಪಾಲಿಕೆಗೆ ಇಡೀ ಶಾಪ ಹಾಕುತ್ತಿದ್ದು, ಅಲ್ಲಿನ ನಾಗರಿಕರು ಪ್ರತಿಭಟನೆಗಳನ್ನು ನಡೆಸಿದ್ದರೂ ಇದ್ಯಾವುದಕ್ಕೂ ಆಯುಕ್ತರಾಗಲೀ, ಮಹಾಪೌರ ರಾಗಲೀ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಕೂಡಲೇ ನಾಯಿಗಳ ಉಪಟಳ ನಿಲ್ಲಿಸಲು ಕ್ರಮಕೈಗೊಳ್ಳಲಿ  ಹಾಗೂ ನಾಯಿಗಳನ್ನು ಊರಿಂದ ಸಾಗಿಸಲು ಕ್ರಮಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.