ಅತಿವೃಷ್ಟಿ : ಹೊನ್ನಾಳಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ

ಅತಿವೃಷ್ಟಿ : ಹೊನ್ನಾಳಿಯಲ್ಲಿ  ಇಬ್ಬರು ರೈತರು ಆತ್ಮಹತ್ಯೆ

ಹೊನ್ನಾಳಿ, ನ.25- ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಸಿದ್ದಪ್ಪ (62) ಎಂಬ ರೈತ ತನ್ನ ಕಣದ ಮನೆಯಲ್ಲಿ ಗುರುವಾರ ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.  

ತನ್ನ ಎರಡು ಎಕರೆ ಗದ್ದೆಯಲ್ಲಿ ಸಿದ್ಧಪ್ಪ ಭತ್ತ ಬೆಳೆದಿದ್ದರು. ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ಭತ್ತದ ಪೈರು ನೆಲಕಚ್ಚಿತ್ತು. ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಕಂಗಾಲಾದ ರೈತ ಆತ್ಮಹತ್ಯೆ ದಾರಿ ತುಳಿದಿದ್ದಾರೆ ಹಾಗೂ ಸಿದ್ದಪ್ಪ ಖಾಸಗಿಯಾಗಿ ಸುಮಾರು 3 ಲಕ್ಷ ರೂ.ಗಳಷ್ಟು ಸಾಲ ಮಾಡಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

ಅತಿವೃಷ್ಟಿ ಹಿನ್ನೆಲೆಯಲ್ಲಿ ತಾಲ್ಲೂಕಿನ ಪ್ರವಾಸದಲ್ಲಿದ್ದ ಸಂಸದ  ಜಿ.ಎಂ.ಸಿದ್ದೇಶ್ವರ ಅವರು ಸಿದ್ದಪ್ಪನ ಮೃತದೇಹದ ಅಂತಿಮ ದರ್ಶನ ಪಡೆದ ಬಳಿಕ ಅವರ ಕುಟುಂಬಸ್ಥರಿಗೆ 25 ಸಾವಿರ ರೂ. ಮತ್ತು ಬಿಜೆಪಿ ಮುಖಂಡ ಎಂ.ಪಿ.ರಮೇಶ್ 5 ಸಾವಿರ ರೂ.ಗಳ ಪರಿಹಾರ ನೀಡಿದರು.

ಆರುಂಡಿಯಲ್ಲಿ ರೈತ ಆತ್ಮಹತ್ಯೆ : ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಷಣ್ಮುಖಪ್ಪ ಎಂಬ ರೈತ ಬುಧವಾರ ಮಧ್ಯರಾತ್ರಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಘಟನೆ ನಡೆದಿದೆ.

ನ್ಯಾಮತಿಯ ಎಸ್‍ಬಿಐಯಲ್ಲಿ ಮೃತ ರೈತ 5 ಲಕ್ಷ ಸಾಲ ಮಾಡಿ ದ್ದಾನೆ ಎನ್ನಲಾಗಿದ್ದು, ಕುಟುಂಬ ಸ್ಥರ ಜಂಟಿ ಖಾತೆಯಲ್ಲಿದ್ದ ಸುಮಾರು 9 ಎಕರೆ ಜಮೀನಿನಲ್ಲಿ ಈರುಳ್ಳಿ, ಹೂಕೋಸು, ಬೆಳ್ಳುಳ್ಳಿ, ಟೊಮ್ಯಾಟೊ ಬೆಳೆದಿದ್ದ ಎನ್ನಲಾಗಿದ್ದು, ಅತಿವೃಷ್ಟಿಯಿಂದ ಬೆಳೆಹಾನಿಗೊಂಡಿದ್ದ ಪರಿಣಾಮ ಆತ್ಮಹತ್ಯೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.