ಪೋಷಕರನ್ನು ಶ್ರದ್ಧಾ – ಭಕ್ತಿಯಿಂದ ಕಾಣಬೇಕು

ಪೋಷಕರನ್ನು ಶ್ರದ್ಧಾ – ಭಕ್ತಿಯಿಂದ ಕಾಣಬೇಕು

ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ

ಸಿರಿಗೆರೆ, ಅ.20- ಎಲ್ಲಾ ಧರ್ಮಗಳಲ್ಲೂ ಹೇಳಿರುವಂತೆ ತಂದೆ – ತಾಯಿಯವರು ನೀವು ಚಿಕ್ಕವರಿದ್ದಾಗ ನಿಮ್ಮನ್ನು ಹೇಗೆ ಕಾಪಾಡಿದ್ದಾರೋ ಹಾಗೆ, ನೀವು ವಯಸ್ಸಾದ ತಂದೆ – ತಾಯಿಯರನ್ನು ಅಷ್ಟೇ ಶ್ರದ್ಧಾ- ಭಕ್ತಿಯಿಂದ ಕಾಣಬೇಕು. ಅದು ನೀವು ನೀಡುವ ಅತ್ತ್ಯುನ್ನತ ಗೌರವವಾಗಿದೆ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇಂದಿಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ  ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಭರಮಸಾಗರ ಕೆರೆಗೆ ತುಂಗಭದ್ರೆ ನೀರು ಹರಿದು ಬರುತ್ತಿರುವುದನ್ನು ನೀವು ನೋಡಿ ಕಣ್ತುಂಬಿಕೊಂಡಿದ್ದೀರಿ. ಆ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗುವ ಕಾರ್ಯವನ್ನು ವೇಗವಾಗಿ ನಿರ್ವಹಿಸಿದ್ದಕ್ಕೆ ನೀರಾವರಿ ಅಧಿಕಾರಿಗಳನ್ನು ಶ್ರೀಗಳು ಶ್ಲ್ಯಾಘಿಸಿದರು. 

ಗೌರಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆಗೆ ಈಗಾಗಲೇ ಓಬವ್ವನಾಗ್ತಿಹಳ್ಳಿಯ ಹತ್ತಿರ 12 ಲಕ್ಷ ರೂ. ವೆಚ್ಚದಲ್ಲಿ ಒಂದು ಸಂಪ್ ಕಾರ್ಯ ನಡೆಯುತ್ತಿದೆ. ಆ ನೀರನ್ನು ಓವರ್‍ಲೋಡ್ ಟ್ಯಾಂಕ್‍ಗೆ ಬರುವ ಹಾಗೆ ಮಾಡಿ ನಿಮಗೆ ಕುಡಿಯುವ ನೀರನ್ನು ತಲುಪಿಸುವ ಕಾರ್ಯ ಶೀಘ್ರವಾಗಿ ನಡೆಸುವಂತೆ ಶ್ರೀಗಳು ಅಧಿಕಾರಿಗಳನ್ನು ಕೇಳಿಕೊಂಡರು. 

ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಬೇಗ್, ಸಮಿಉಲ್ಲಾಖಾನ್, ಇಸಾಖ್‌ ಬೇಗ್, ಮಂಡಲ ಪಂಚಾಯಿತಿ ಸದಸ್ಯರಾದ ಫರ್ವೇಜ್‌ ಬೇಗ್, ಸೈಯ್ಯದ್ ಆತಿಕ್, ಸೈಯ್ಯದ್ ಭಾಷಾ ಗೌರಮ್ಮನಹಳ್ಳಿ, ಚಿಕ್ಕಾಲಘಟ್ಟ, ಕಲ್ಕುಂಟೆ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು. 

ರಹಮತ್ ಉಲ್ಲಾ ಬೇಗ್ ಸ್ವಾಗತಿಸಿದರು. ಅಬ್ದುಲ್ ರಹೀಮ್ ನಿರೂಪಿಸಿದರು.