ಪೌಷ್ಠಿಕ ಆಹಾರಕ್ಕೆ ನಿರಂತರ ಅಭಿಯಾನ

ಪೌಷ್ಠಿಕ ಆಹಾರಕ್ಕೆ ನಿರಂತರ ಅಭಿಯಾನ

ಟಿ.ಕೆ.ವಿ.ಕೆ.ಯಲ್ಲಿ ಆಯೋಜಿಸಲಾಗಿದ್ದ ಪೋಷಣ ದಿನಾಚರಣೆಯಲ್ಲಿ ಕರೆ

ಗ್ಲುಟೆನ್ ಹಾಗೂ ಸಕ್ಕರೆ ಅಂಶ ಕಡಿಮೆ ಹಾಗೂ ಫೈಬರ್ ಹೆಚ್ಚಾಗಿರುವ ಬಾಕಾಹು (ಬಾಳೆ ಕಾಯಿ ಹುಡಿ) ಅನ್ನು ಬಯಲು ಸೀಮೆಯಲ್ಲೂ ಜನಪ್ರಿಯ ಗೊಳಿಸಲು ಕಾರ್ಯಾಗಾರ

ದಾವಣಗೆರೆ, ಸೆ. 19 – ಆರೋಗ್ಯಕರ ಜೀವನಕ್ಕಾಗಿ ಪೌಷ್ಠಿಕ ಆಹಾರ ಅತ್ಯಗತ್ಯ. ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೌಷ್ಠಿಕ ಬೆಳೆ ಮತ್ತು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳ ಲೇಬೇಕಾಗಿದೆ ಎಂದು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ.

ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಇಫ್ಕೋ, ಭಾರತ ಅಮೃತ ಮಹೋತ್ಸವಗಳ ಸಂಯುಕ್ತಾಶ್ರಯದಲ್ಲಿ ಪೋಷಣ ದಿನಾಚರಣೆ ಅಂಗವಾಗಿ ಆಯೋಜಿಸ ಲಾಗಿದ್ದ ಪೌಷ್ಠಿಕ ತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಹಾಗೂ §ಬಾಳೆ ಬೆಳೆಗಾರರ ಹಾಗೂ ಗ್ರಾಹಕರ ಬಾಳು ಬೆಳಗಲು ಬಾಕಾಹು’ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಮಕ್ಕಳು, ಬಾಣಂತಿಯರು ಹಾಗೂ ತಾಯಂದಿರಿಗೆ ವಿಶೇಷವಾಗಿ ಪೌಷ್ಠಿಕ ಆಹಾರದ ಅಗತ್ಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ 2018ರ ಮಾರ್ಚ್ 8 ರಿಂದ ಪೋಷಣ ಅಭಿಯಾನ ಆರಂ ಭಿಸಲಾಗಿದ್ದು, ನಿರಂತರವಾಗಿ ಅಭಿಯಾನ ನಡೆ ಯುತ್ತಿದೆ. ಇದು ಈ ಮೂರು ವರ್ಗದವರಿಗಷ್ಟೇ ಅಲ್ಲದೇ, ಎಲ್ಲರಿಗೂ ಜೀವನವಿಡೀ ನಿರಂತರ ಪೌಷ್ಠಿಕ ಆಹಾರ ಬೇಕಿದೆ ಎಂದು ಹೇಳಿದರು.

ಪೌಷ್ಠಿಕ ಕೈ ತೋಟದಿಂದ ಅಗತ್ಯವಾದ ಬೆಳೆಯನ್ನು ತಾವೇ ಬೆಳೆದುಕೊಳ್ಳುವುದು ಉತ್ತಮ. ಇತ್ತೀಚೆಗೆ ರೈತರು ತೋಟಗಳಲ್ಲಿ ತರಕಾರಿ ಬೆಳೆದು ತಾವೇ ರಸ್ತೆ ಬದಿಯಲ್ಲಿ ಮಾರುತ್ತಿರುವುದೂ ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಈ ವರ್ಷ ಜಿಲ್ಲೆಯಲ್ಲಿ ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯುವ ಗುರಿ ಹೊಂದಲಾಗಿದೆ. ನಾವೇ ರೈತರ ಹೊಲಗಳಿಗೆ ಬೀಜಗಳನ್ನು ತಲುಪಿಸಿದ್ದೇವೆ. ಈಗ ಬೆಳೆ ನಿರ್ವಹಣೆಯ ಜೊತೆಗೆ ತೊಗರಿ ಖರೀದಿ ಕೇಂದ್ರ ತೆರೆಯುವವರೆಗೆ ರೈತರಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ. ಇಂತಹ ಕ್ರಮಗಳಿಂದ ತೊಗರಿ ಆಮದು ನಿಂತು, ನಾವೇ ರಫ್ತು ಮಾಡುವ ಹಂತಕ್ಕೆ ಬರಬಹುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ (ಮಣ್ಣು ವಿಜ್ಞಾನ), ಬಾಳೆಕಾಯಿಯಿಂದ ಉತ್ಪಾದಿಸುವ ಬಾಕಾಹು (ಬಾಳೆ ಕಾಯಿ ಹುಡಿ) ಆರೋಗ್ಯಕ್ಕೆ ಉತ್ತಮ ವಾಗಿದೆ. ಇದರಲ್ಲಿ ಗ್ಲುಟೆನ್ ಹಾಗೂ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಫೈಬರ್ ಹಾಗೂ ಪೊಟ್ಯಾಷಿ ಯಂ ರೀತಿ ಅಂಶಗಳು ಹೆಚ್ಚಾಗಿರುತ್ತವೆ ಎಂದರು.

ದೀಪಾವಳಿಯ ನಂತರ ಬಾಳೆಗೆ ಬೇಡಿಕೆ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಳೆ ಕಾಯಿಯನ್ನು ಹುಡಿಯಾಗಿ ಪರಿವರ್ತಿಸಿ ಮಾರುವುದರಿಂದ ಉತ್ತಮ ಮಾರುಕಟ್ಟೆ ಸಿಗುತ್ತದೆ. ಮಲೆನಾಡಿನಲ್ಲಿ ಬಾಕಾಹು ಸಾಕಷ್ಟು ಜನಪ್ರಿಯವಾಗಿದ್ದು, ಬಯಲು ಸೀಮೆಯಲ್ಲೂ ಜನಪ್ರಿಯತೆ ಪಡೆಯಬೇಕಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಿ. ಮಲ್ಲಾನಾಯ್ಕ, ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರಾದ ಸಿ.ಟಿ. ಚಂದ್ರಪ್ಪ, ಮುರುಗೇಶಪ್ಪ, ದೇಸಿ ತರಬೇತಿ ಕಾರ್ಯಕ್ರಮದ ಸಂಯೋಜಕ ಬಿ.ಜಿ. ರುದ್ರಪ್ಪ, ಇಫ್ಕೋ ಕ್ಷೇತ್ರ ಅಧಿಕಾರಿ ಎಸ್. ರಾಜೇಂದ್ರ ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೂರಿನ ಪ್ರಗತಿಪರ ಮಹಿಳೆ ಸರೋಜ ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಎಂ.ಜಿ. ಬಸವನಗೌಡ, ಬಿ.ಒ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಜೆ. ರಘುರಾಜ ಸ್ವಾಗತಿಸಿದರೆ, ಡಾ. ಜಿ.ಕೆ. ಜಯದೇವಪ್ಪ ವಂದಿಸಿದರು.