ಉತ್ತಮ ಆಡಳಿತ, 150ರ ಗುರಿ

ಉತ್ತಮ ಆಡಳಿತ, 150ರ ಗುರಿ

ಸೊಸೈಟಿಯಿಂದ ಸಂಸತ್ತಿನವರೆಗಿನ ಎಲ್ಲಾ ಚುನಾವಣೆಗಳಲ್ಲೂ ವಿಜಯ ರಥ ಮುನ್ನಡೆಸಲು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಣ

ದಾವಣಗೆರೆ, ಸೆ. 19 – ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಯೋಜನೆಗಳ ಬಗ್ಗೆ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಜನರಿಗೆ ತಿಳಿಸುವ ಬಿಜೆಪಿಯ ವಿಜಯ ರಥ ಮುನ್ನಡೆಸಲು ಬಿಜೆಪಿ ಕಾರ್ಯಕಾರಿಣಿಯ ಉದ್ಘಾಟನಾ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. 

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಗಳಲ್ಲಿ ಗೆದ್ದಿರುವ ರೀತಿಯಲ್ಲೇ, ಮುಂದಿನ ಒಂದು ವರ್ಷ ನಡೆಯಲಿರುವ ಪಂಚಾಯ್ತಿ, ಪರಿಷತ್ ಹಾಗೂ ವಿಧಾನಸಭಾ  ಉಪ ಚುನಾವಣೆಗಳಲ್ಲಿ ಗೆಲ್ಲುವುದರೊಂದಿಗೆ, 2023ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ. 

ಬರುವ ದಿನಗಳಲ್ಲಿ ಉತ್ತಮ ಆಡಳಿತ ಮಾಡಿ ಜನಪರ ಆಡಳಿತ ನೀಡುವ ಸಂಕಲ್ಪ ಹಾಗೂ ವಿಧಾನಸಭಾ ಅಧಿವೇಶನದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಆಡಳಿತದ ಚುಕ್ಕಾಣಿ ಚುರುಕು ಮಾಡುವ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ನಗರದ ತ್ರಿಶೂಲ್ ಸಭಾಭವನದಲ್ಲಿ ಕಾರ್ಯಕಾರಿಣಿ ಆಯೋಜಿಸಲಾಗಿತ್ತು.

ಕಾರ್ಯಕಾರಿಣಿಯನ್ನು ಸಾಂಕೇತಿಕವಾಗಿ ಮೆಕ್ಕೆಜೋಳವನ್ನು ರಾಶಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೊಸೈಟಿಯಿಂದ ಸಂಸತ್ತಿನವರೆಗೆ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉಪ ಚುನಾವಣೆ, ಪಂಚಾಯ್ತಿ ಚುನಾವಣೆಗಳಲ್ಲೂ ಜಯ ಗಳಿಸುತ್ತೇವೆ ಎಂದಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ – ಧಾರವಾಡ ಹಾಗೂ ಕಲಬುರಗಿ ಪಾಲಿಕೆ ಚುನಾವಣೆಯ ರೀತಿಯಲ್ಲೇ ಬೆಂಗಳೂರು ಪಾಲಿಕೆ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡಿ, ಸ್ವತಂತ್ರವಾಗಿ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಯಡಿಯೂರಪ್ಪ ನೇತೃತ್ವದಲ್ಲಿ ವಿಜಯ ರಥ ಆರಂಭವಾಗಿದೆ. ಬೊಮ್ಮಾಯಿ ಅವರ ಅವಧಿಯಲ್ಲೂ ಈ ವಿಜಯ ರಥ ನಿರಂತರವಾಗಿ ಸಾಗಬೇಕಿದೆ. ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯ್ತಿಗಳಲ್ಲಿ ಗೆಲ್ಲುವುದಷ್ಟೇ ಅಲ್ಲದೇ, 2023ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹಮತ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮುಂದಿನ ತಿಂಗಳು ನಾನೊಬ್ಬನೇ ಅಲ್ಲ ಶಾಸಕರು ಹಾಗೂ ಸಂಸದರು ಜೊತೆಯಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ಮೈಸೂರಿನಲ್ಲಿ ನಡೆಸಲಾದ ಮೋದಿ ಯುಗ ಉತ್ಸವ ರೀತಿಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಬೇಕಿದೆ ಎಂದು ತಿಳಿಸಿದರು.

ಬರುವ ವರ್ಷ ಚುನಾವಣಾ ವರ್ಷವಾಗಿದೆ. ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಗಳು ಅಗ್ನಿಪರೀಕ್ಷೆಗಳಾಗಿವೆ. ಈ ಚುನಾವಣೆಗಳನ್ನು  ಬಿಜೆಪಿ ಗೆಲ್ಲುವುದು ಕಾಂಗ್ರೆಸ್‌ಗೆ ಪಾಠವಾಗಬೇಕು ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಅಕ್ಟೋಬರ್‌ ಮೊದಲ ವಾರದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಪಂಚಾಯತ್ ಸದಸ್ಯರ ಸಮ್ಮೇಳನ ನಡೆಸಲಾಗುವುದು. ಸೇವೆ – ಸಮರ್ಪಣೆ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಂಪೂರ್ಣವಾಗಿ ಭಾಗಿಯಾಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಪಣ ತೊಡಬೇಕು ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಶೋಭ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ರಾಜ್ಯ ಸಹ ಉಸ್ತುವಾರಿ ಡಿ.ಕೆ. ಅರುಣ್, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಕಟೀಲ್ ಅವರು ಬಿಜೆಪಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ವಂದಿಸಿದರು.