ನಡೆ-ನುಡಿ ಒಂದಾಗದೆ ಶಿವಸುಖ ಸಾಧ್ಯವಿಲ್ಲ

ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸದಲ್ಲಿ ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ, ಅ.1-`ಮತ್ತೆ ಕಲ್ಯಾಣ’ ಮನದ ಕಾಳಿಕೆ ಕಳೆದು ನೈಜ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವಂತಹುದು. ಕತ್ತಲಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕಾಯಕಜೀವಿಗಳನ್ನು ಕರೆದೊಯ್ಯುವ ಕಾರ್ಯವನ್ನು ಬಸವಾದಿ ಶಿವಶರಣರು ಮಾಡಿದ್ದು ಸ್ಮರಣಾರ್ಹ. `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಆ ಪಥದಲ್ಲಿ ಒಂದೊಂದೇ ಹೆಜ್ಜೆ ನಡೆಯುವ ಸಂಕಲ್ಪ ಮಾಡೋಣ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಂದಿನಿಂದ ಆಗಸ್ಟ್ 31 ರವರೆಗೆ ಆಯೋಜಿಸಿರುವ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಶರಣರ ಬದುಕಿಗೂ ಶರಣರಲ್ಲದವರ ಬದುಕಿಗೂ ಸಾಕಷ್ಟು ಅಂತರ ಇದೆ. ಶರಣರು ತಮ್ಮ ದೇಹದ ಮೇಲೆ ಹತೋಟಿ ಸಾಧಿಸಿ ದೇಹದ ಗುಣಗಳನ್ನು ನಿವಾರಿಸಿಕೊಂಡವರು. ನಡೆ ನುಡಿಗಳ ಹೊಂದಾಣಿಕೆಗೆ ವಿಶೇಷ ಮಹತ್ವ ನೀಡಿದವರು ಶರಣರು. ಅವರು ನುಡಿಜಾಣರಷ್ಟೇ ಅಲ್ಲ, ನಡೆಧೀರರೂ ಹೌದು. ಅದರಿಂದಾಗಿಯೇ ಶರಣರು ಮಂಗಳದ ಮಹಾಬೆಳಗಿನಲ್ಲಿ ಓಲಾಡಲು ಸಾಧ್ಯವಾದುದು. ನಡೆ ನುಡಿ ಒಂದಾಗದೆ ಶಿವಸುಖ ಸಾಧ್ಯವಾಗದು ಎಂದರು. 

ಬಸವಾದಿ ಶಿವಶರಣರು `ಅನುಭವ ಮಂಟಪ’ ಎನ್ನುವ ಸಮಾಜೋ ಧಾರ್ಮಿಕ ಸಂಸತ್ತಿನ ಮೂಲಕ ಅನೇಕರ ಬದುಕಿನ ಕತ್ತಲೆಯನ್ನು ಕಳೆದು ಬೆಳಕಿನ ಕಡೆ ಮುಖ ಮಾಡಲು ಪ್ರೇರಕರಾದರು. ಅದರಲ್ಲೂ ಕಾಯಕ ಜೀವಿಗಳ ಮೇಲೆ ಶರಣರ ಚಳವಳಿ ಬೀರಿದ ಪ್ರಭಾವ ಅವಿಸ್ಮರಣೀಯವಾದುದು ಎಂದರು. `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ  ಸಾಹಿತಿ,  ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಮಾಜಕ್ಕೆ ಕಲ್ಯಾಣ ಕ್ರಾಂತಿಯ ಮೌಲ್ಯಗಳ ಅವಶ್ಯಕತೆ, ಪುನರಾವರ್ತನೆ, ಪುನರ್ ಬೋಧೆ ಮಾಡುವ ಅಗತ್ಯ, ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದರು.

ನಾವು ಭ್ರಷ್ಟಾಚಾರವನ್ನು ಬದುಕಿನ ಭಾಗ ಎಂದು ಒಪ್ಪಿಕೊಳ್ಳುವಷ್ಟು ಭ್ರಷ್ಟರಾಗಿದ್ದೇವೆ. ಎಷ್ಟೆಲ್ಲ ವಿಜ್ಞಾನ, ಸಂಶೋಧನೆ, ನಾಗರೀಕತೆ ಬೆಳೆದರೂ ಬಡವ-ಬಲ್ಲಿದರ ನಡುವಿನ ಅಂತರ ದಿನೇದಿನೇ ದೊಡ್ಡದಾಗುತ್ತಿದೆ. ಈ ಕಾರಣಕ್ಕಾಗಿಯೇ ನಾವು 12 ನೇ ಶತಮಾನದ ಕಡೆ ಮುಖಮಾಡಬೇಕಿದೆ ಎಂದರು.

ಉಪನ್ಯಾಸ ಮಾಲಿಕೆಯಲ್ಲಿ `ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ’ ವಿಷಯ ಕುರಿತು  ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕವಿತಾ ರೈ ಮಾತನಾಡುತ್ತಾ,   12 ನೆಯ ಶತಮಾನದ ಅನುಭವ ಮಂಟಪದ ಅನುಭಾವದಲ್ಲಿ ತೊಡಗಿಕೊಂಡ, ಅಧ್ಯಾತ್ಮಿಕ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಮುಖರಲ್ಲಿ ಲಿಂಗಮ್ಮ ಕೂಡ ಒಬ್ಬರು. ಈಕೆ 114 ವಚನಗಳನ್ನು ಬರೆದಿದ್ದಾರೆ. ಈ ಕಾಲಕ್ಕೂ 12ನೆಯ ಶತಮಾನದ ಕಲ್ಯಾಣದ ಕ್ರಾಂತಿ ಆಲ್ಟ್ರಾ ಮಾರ್ಡನ್ ಆಗಿದೆ ಎಂದರು.

ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿವಸಂಚಾರದ ಕೆ ಜ್ಯೋತಿ, ಕೆ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ಅತ್ಯಂತ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಮತ್ತು ಹೊಸದುರ್ಗದ ಕನಕ ಪ್ರಿಯ ನಾಟ್ಯಕಲಾ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಶ್ರೀಮತಿ ರಮಾ ದಿ. ಬಿ.ಎಸ್ ಕಲ್ಲೇಶ್ವರಪ್ಪ ಈ ದಿನದ ದಾಸೋಹಿಗಳಾಗಿದ್ದರು.