ಸಹೋದರಿಯರ ಸಾವು: ಕೊಲೆ ?

ದಾವಣಗೆರೆ, ಜು.30- ವಾಸವಿದ್ದ ಮನೆಯಲ್ಲೇ ಸಹೋದರಿಯರಿಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಕೂಡ್ಲಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಗೌರಮ್ಮ ಹಾಗೂ ರಾಧಿಕಾ ಹತ್ಯೆಗೀಡಾದ ಸಹೋದರಿಯರು. 

ಈ ಇಬ್ಬರು ಸಹೋದರಿಯರು ನಗರದ ಹೊರವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ಬಡಾವಣೆಯ ಮನೆಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಎರಡರಿಂದ ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಮನೆಯಿಂದ ಹೊರಗೂ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರ ಸಂಬಂಧಿ ಚಂದ್ರಮ್ಮ ಸಹೋದರಿಯರಿಗೆ ಹಲವು ಬಾರಿ ಕರೆ ಮಾಡಿದರೂ ಫೋನ್ ಬಂದ್ ಆಗಿತ್ತು. ತಿರುಗ ದಿನ ಸಂಬಂಧಿ ಚಂದ್ರಮ್ಮ ಮನೆಗೆ ಬಂದಿದ್ದರು. ಆಗ ಮನೆಯಿಂದ ಯಾವುದೋ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ. ಇದರಿಂದ ಆತಂಕಗೊಂಡ ಚಂದ್ರಮ್ಮ ಈ ಸಂಬಂಧ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಗೌರಮ್ಮ ಹಾಗೂ ರಾಧಿಕಾ ಅವರ ಶವ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಕಳೆದೆರಡು ದಿನಗಳ ಹಿಂದೆ ಗೌರಮ್ಮ ಪತಿ ಮಂಜುನಾಥ್ ಮನೆಗೆ ಬಂದು ಹೋಗಿದ್ದು, ಅಂದು ರಾತ್ರಿ ಇಬ್ಬರು ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.