ಲಸಿಕಾ ಉತ್ಸವ ಅಭಿಯಾನಕ್ಕೆ ಚಾಲನೆ

ಲಸಿಕಾ ಉತ್ಸವ ಅಭಿಯಾನಕ್ಕೆ ಚಾಲನೆ

ದಾವಣಗೆರೆ, ಏ. 15- ಕೋವಿಡ್ ಎರಡನೇ ಅಲೆ ಹರಡುವುದನ್ನು ಪರಿಣಾಮಕಾರಿ ಯಾಗಿ ತಡೆಯುವ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟ ಜಿಲ್ಲೆಯ ಎಲ್ಲಾ ವಕೀಲರಿಗೆ ಇಂದಿನಿಂದ 3 ದಿನಗಳ ಕಾಲ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.

ಜಿಲ್ಲಾ ನ್ಯಾಯಾಲಯ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಲಸಿಕಾ ಉತ್ಸವ ಅಭಿಯಾನದಲ್ಲಿ ಮಾತನಾಡಿದ ಅವರು, ಈಗಾಗಲೇ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದು, ಇದುವರೆಗೂ ಲಸಿಕೆ ಪಡೆಯದ ಜಿಲ್ಲೆಯ 45 ವರ್ಷ ಮೇಲ್ಪಟ್ಟ ಎಲ್ಲಾ ವಕೀಲರು, ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ತೀವ್ರ ಪರಿಣಾಮದಿಂದ ತಪ್ಪಿಸಿಕೊಳ್ಳಲು ಲಸಿಕೆ  ಸಹಕಾರಿಯಾಗಿದೆ.   ಎಲ್ಲರೂ ಸ್ವಯಂ ಇಚ್ಚೆಯಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ಲಸಿಕೆ ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ.  ಕೊರೊನಾ ಬಂದರೂ ಅದರ ತೀವ್ರತೆ ಕಡಿಮೆ ಇರುತ್ತದೆ ಹಾಗೂ ಸಾವಿನ ದವಡೆಯಿಂದ ಪಾರಾಗಬಹುದು.  

ಲಸಿಕೆ ಹಾಕಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದ ಕಡೆ ಸಾಗೋಣ  ಎಂದು ಕೆ.ಬಿ. ಗೀತಾ ಸಲಹೆ ನೀಡಿದರು.

ನಗರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ-1 ರ ಸರ್ಜನ್ ಡಾ. ನಾಗರಾಜ್ ಮಾತನಾಡಿ, ದಾವಣಗೆರೆ ಜಿಲ್ಲಾ ಸಂಕೀರ್ಣಕ್ಕೆ ಒಳಪಡುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಕೀಲರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, 45 ವರ್ಷ ಮೇಲ್ಪಟ್ಟವರಿಗೆ 3 ದಿನದ ಅಭಿಯಾನದಲ್ಲಿ ಪ್ರತಿದಿನ 100 ಜನರಂತೆ ಒಟ್ಟು 300 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಕೋವಿಡ್‍ಗೆ ಸಂಬಂಧಿಸಿದ ಲಸಿಕೆ ಹಾಕಿಸಿಕೊಂಡವರಿಗೆ ಅರ್ಧ ಗಂಟೆ ನಿರೀಕ್ಷಣೆಯಲ್ಲಿರಿಸಿ ಪರಿಶೀ ಲಿಸಲಾಗುವುದು.  

ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡವರಿಗೆ 2ನೇ ಡೋಸ್ 4 ವಾರದ ಬಳಿಕ ಹಾಕಲಾಗುತ್ತದೆ.  ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಮೊದಲ ಡೋಸ್ ಪಡೆದ 6 ವಾರಗಳ ನಂತರ 2ನೇ ಡೋಸ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಭಿಯಾನದಲ್ಲಿ ಹಿರಿಯ ನ್ಯಾಯವಾದಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಟಿ.ಮಂಜುನಾಥ್, ವಕೀಲರಾದ ಅನ್ನಪೂರ್ಣಮ್ಮ, ಎಸ್.ಆರ್.ಚಂದ್ರಶೇಖರ್, ರಮೇಶ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಲಸಿಕೆ ಪಡೆದರು.

Leave a Reply

Your email address will not be published.