ಕೊರೊನಾ ತಡೆಯಲು 15 ದಿನಗಳ ನಿರ್ಬಂಧ

ಸರ್ಕಾರಕ್ಕೆ ತಜ್ಞರ ಸಲಹಾ ಸಮಿತಿ ಶಿಫಾರಸ್ಸು

ಬೆಂಗಳೂರು, ಏ. 15 – ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗ ತಡೆಗಟ್ಟಲು ದೆಹಲಿ ಮತ್ತು ಮಹಾರಾಷ್ಟ್ರ ಮಾದರಿಯಲ್ಲೇ ಅನುಷ್ಠಾನಗೊಳಿಸುವಂತೆ ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. 

ಲಾಕ್‍ಡೌನ್ ಇದ್ದ ಸಂದರ್ಭದಲ್ಲಿ ಅನುಷ್ಠಾನಕ್ಕಿದ್ದ ಕಾರ್ಯಾಚರಣೆಗಳನ್ನು 15 ದಿನಗಳ ಮಟ್ಟಿಗಾದರೂ ಜಾರಿಗೊಳಿಸದಿದ್ದರೆ, ಸೋಂಕು ನಿಯಂತ್ರಣ ತಪ್ಪುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಜನಸಮುದಾಯ ಗುಂಪು ಸೇರುವುದನ್ನು ತಡೆಗಟ್ಟಲು ಮೊದಲು ಕಠಿಣ ಕ್ರಮ ಕೈಗೊಳ್ಳಿ. ಇದಕ್ಕಾಗಿ ಸೆಕ್ಷನ್ 144 ಜಾರಿಗೆ ತಂದರೂ ಒಳಿತು. ಕ್ಲಬ್, ಬಾರ್, ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಳಿಗೆ ಮಾತ್ರ ಅವಕಾಶ ಮಾಡಿಕೊಡಿ. ಸಾಂಕ್ರಾಮಿಕ ರೋಗ ಹೆಚ್ಚಿರುವ ನಗರ ಪಟ್ಟಣಗಳಲ್ಲಿ ಸಂಜೆ 6 ರಿಂದ ಮುಂಜಾನೆ 6 ರವರೆಗೂ ಕರ್ಫ್ಯೂ ವಿಸ್ತರಿಸುವುದು ಒಳಿತು ಎಂದಿದ್ದಾರೆ. 

ಎಲ್ಲಿಯೂ ಐದು ಜನರ ಗುಂಪು ಸೇರಿದಂತೆ ನೋಡಿಕೊಳ್ಳಬೇಕು. ಜನಸಂದಣಿ ಇರುವ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಮುಚ್ಚಿಸುವಂತೆ ಸಲಹೆ ಮಾಡಿದೆ. 

ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಒಂದೆರಡು ದಿನಗಳಲ್ಲೇ ಹಿರಿಯ ಅಧಿಕಾರಿಗಳ ಸಭೆ ಕರೆದು, ತಜ್ಞರ ಶಿಫಾರಸ್ಸು ಸೇರಿದಂತೆ ಚರ್ಚೆ ಮಾಡಲಿದ್ದಾರೆ. 

ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಾ ನಾಳೆ ಹಿರಿಯ ಪೊಲೀಸ್ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿ, ಸೋಂಕು ನಿವಾರಣೆ ಮತ್ತು ತಡೆಗಟ್ಟಲು ಇಲಾಖೆ ವತಿಯಿಂದ ಕೆಲವು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಮುಖ್ಯಮಂತ್ರಿಯವರು ಏಪ್ರಿಲ್ 18 ರಂದು ಸರ್ವಪಕ್ಷಗಳ ನಾಯಕರ ಸಭೆ ಕರೆದಿದ್ದು, ಅದಕ್ಕೂ ಮುನ್ನವೇ ಆರೋಗ್ಯ ಮತ್ತು ಗೃಹ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸಿ, ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

Leave a Reply

Your email address will not be published.