ರಾಜಕೀಯ ಸಮಾವೇಶಗಳಲ್ಲಿ ಕೊರೊನಾ ಹರಡುವುದಿಲ್ಲವೇ….

ಮಾನ್ಯರೇ,


ದೇಶದಾದ್ಯಂತ ಕೊರೊನಾ ಎರಡನೇ ಅಲೆಯ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಅದರ ವ್ಯಾಪ್ತಿಯನ್ನು ದಿನೇ ದಿನೇ ವಿಸ್ತರಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಹಲವಾರು ವಲಯಗಳು/ಕ್ಷೇತ್ರಗಳಿಗೆ ನಿರ್ಬಂಧ ವಿಧಿಸಿದ್ದು ಇನ್ನೂ ಹಲವು ವಲಯಗಳಿಗೆ ಶೇಕಡ 50ರಷ್ಟು ನಿರ್ಬಂಧ ವಿಧಿಸಿರುವ ಜೊತೆಗೆ ಮುಂದೆಯೂ ಇನ್ನಷ್ಟು  ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಆದರೆ ಇದೇ ತಿಂಗಳು ನಡೆಯುವ ಉಪಚುನಾವಣೆಯ ರಾಲಿಗಳಿಗೆ  ಸರ್ಕಾರದ ನಿರ್ಬಂಧಗಳು/ನಿಯಮಗಳು ಅನ್ವಯಿಸುವುದಿಲ್ಲವೇ?  

ಸರ್ಕಾರದ ನಿಯಮಗಳು ಕೇವಲ ಬಡ ಮತ್ತು ಮಧ್ಯಮ ವರ್ಗಗಳ ಸಮಾರಂಭಗಳು ಮದುವೆ ಕಾರ್ಯಗಳಿಗೆ  ಮಾತ್ರ ಅನ್ವಯಿಸುತ್ತವೆಯೇ? ರಾಜ್ಯ ಸರ್ಕಾರದ ನಡೆ ಕೇವಲ ಗುಬ್ಬಿ ಮೇಲಿನ ಬ್ರಹ್ಮಾಸ್ತ್ರ.  ರಾಜ್ಯದ ಮೂರು ಪಕ್ಷಗಳ ರಾಜಕೀಯ  ನಾಯಕರುಗಳು ಪೈಪೋಟಿಗಿಳಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ. ಕನಿಷ್ಠ ಜನ ಸೇರುವ ಮದುವೆ ಸಮಾರಂಭಗಳಲ್ಲಿ ಹರಡುವ ಕೊರೊನಾ, ರಾಜಕೀಯ  ಸಮಾವೇಶಗಳಲ್ಲಿ ಹರಡುವುದಿಲ್ಲವೇ? ಈ ಹಿಂದೆ ದೇಶದಲ್ಲಿ ಒಂದು ಕೊರೊನಾ ಕೇಸ್ ಇದ್ದಾಗ ಲಾಕ್ ಡೌನ್ ಮಾಡಿದವರು. ಈಗ ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರನ್ನು ಒಗ್ಗೂಡಿಸಿ ಅಪಾಯಕ್ಕೆ ದೂಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ದ್ವಂದ್ವ ನಿಲುವೇಕೆ? ಲಕ್ಷಾಂತರ ಜನ ಸೇರಿಸಿ ಸಮಾವೇಶ ನಡೆಸಿದ್ದಾರಲ್ಲಾ, ಎಷ್ಟು ಜನ ರಾಜಕೀಯ ಮುಖಂಡರು/ಮಠಾಧೀಶರುಗಳ ಮೇಲೆ ಕೇಸ್ ಹಾಕಿ ದಂಡ ವಿಧಿಸಿದ್ದಾರೆ ಎಂಬುದನ್ನು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ.


– ಮುರುಗೇಶ ಡಿ., ದಾವಣಗೆರೆ.

Leave a Reply

Your email address will not be published.