ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಆಯ್ಕೆ ಸಾಧ್ಯವೇ !

ಮಾನ್ಯರೇ,

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ವಿರುದ್ಧ ಲಸಿಕೆ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ನಮ್ಮಲ್ಲಿ ನೀಡಲಾಗುತ್ತಿದೆ. ನಾನು 26 ಮಾರ್ಚ್ ರಂದು ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದೆ. ನನ್ನ ಮೊಬೈಲ್ ಮೂಲಕ ಪಡೆದ ತಾತ್ಕಾಲಿಕ ಪ್ರಮಾಣ ಪತ್ರ ಗಮನಿಸಿದಾಗ ನನಗೆ  ಮೊದಲ ಡೋಸ್ ಕೊವ್ಯಾಕ್ಸಿನ್ ಲಸಿಕೆ ಹಾಕಿದ್ದು ತಿಳಿಯಿತು. ಅದೇ ಆಸ್ಪತ್ರೆಯಲ್ಲಿ ನನ್ನ ಪತ್ನಿ ಲಸಿಕೆಯನ್ನು 31ರ ಮಾರ್ಚ್‌ರಂದು ಪಡೆದಳು. ಮೊಬೈಲ್ ಮೂಲಕ ಪಡೆದ ತಾತ್ಕಾಲಿಕ ಪ್ರಮಾಣ ಪತ್ರ ಗಮನಿಸಿದಾಗ ನನ್ನವಳಿಗೆ ಮೊದಲ ಡೋಸ್ ಕೋವಿಶೀಲ್ಡ್ ನೀಡಿದ ಬಗ್ಗೆ ತಿಳಿಯಿತು. 

ಎರಡನೆಯ ಡೋಸ್ ಲಸಿಕೆಯನ್ನು ನೀಡುವ ವೇಳಾಪಟ್ಟಿ ಕೊವ್ಯಾಕ್ಸಿನ್ 28 ರಿಂದ 42 ದಿನಗಳ ಅಂತರ, ಕೋವಿಶೀಲ್ಡ್ 42 ರಿಂದ 56 ದಿನಗಳ ಅಂತರದಲ್ಲಿ ಪಡೆಯಬೇಕು ಎಂದಿದೆ. ಅದೆಷ್ಟೋ ಜನರಿಗೆ ಯಾವ ಲಸಿಕೆಯನ್ನು (ಕೊವ್ಯಾಕ್ಸಿನ್, ಕೋವಿಶೀಲ್ಡ್) ಹಾಕಿಸಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಹಾಗೆಯೇ ನಾನು ಕೇಳಿದ ಅದೆಷ್ಟೋ ಜನರಿಗೆ ಮೊಬೈಲ್‌ನಲ್ಲಿ ತಾತ್ಕಾಲಿಕ ಪ್ರಮಾಣ ಪತ್ರ ಪಡೆಯುವ ಬಗ್ಗೆ ಕೇಳಿದರೆ… ಅದೇನೋ ಗೊತ್ತಿಲ್ಲ… ಎಲ್ಲಾ ಮೊಬೈಲ್‌ನಲ್ಲಿ ಇರುತ್ತದೆ ಅಂತಾ ಉತ್ತರಿಸುತ್ತಾರೆ.

ಹಾಗೆಯೇ, ಎರಡನೆಯ ಡೋಸ್ ಲಸಿಕೆಯನ್ನು ಪಡೆಯಲು ಹೋದಾಗ ನಾವು ಮೊದಲ ಡೋಸ್ ಯಾವುದನ್ನು ಪಡೆದಿದ್ದೇವೆ ಎಂದು ಹೇಳಬೇಕೇ? ಅಥವ ಯಾವುದಾದರೂ (ಕೊವ್ಯಾಕ್ಸಿನ್, ಕೋವಿಶೀಲ್ಡ್) ಪಡೆದರೂ ಸರಿಯೇ? ಎಂಬ ಅರಿವು ಮೂಡಿಸುವುದು ಅವಶ್ಯಕತೆ ಇದೆ. ಅದೆಷ್ಟೋ ಜನರಿಗೆ ಲಸಿಕೆ ಬಗ್ಗೆ ವಿಶ್ವಾಸವಿಲ್ಲ. ಹೀಗಾಗಿ ಲಸಿಕೆ ಪಡೆಯಲು ಹಿಂದೇಟು ಮಾಡುತ್ತಿದ್ದಾರೆ.


– ರಘುನಾಥರಾವ್ ತಾಪ್ಸೆ, ನಿವೃತ್ತ ಬ್ಯಾಂಕ್ ಅಧಿಕಾರಿ, ದಾವಣಗೆರೆ. ಮೊ: 9945595929

Leave a Reply

Your email address will not be published.