ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು

ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು

ಮಲೇಬೆನ್ನೂರು ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಬಿ.ಎಂ. ವಾಗೀಶ್‌ಸ್ವಾಮಿ

ಮಲೇಬೆನ್ನೂರು, ಏ.7- ಬಿಜೆಪಿ, ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಹೇಳಿದರು.

ಅವರು ಪಟ್ಟಣದ ಕಾಳಿಕಾಂಬ ಸಮುದಾಯ ಭವನದಲ್ಲಿ ಹರಿಹರ ತಾ. ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಲೇಬೆನ್ನೂರು ಶಕ್ತಿಕೇಂದ್ರ ಉದ್ಘಾಟಿಸಿ ಮಾತನಾಡಿದರು.

1951 ರಲ್ಲಿ ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ದನಿ ಎತ್ತಿ ಜನಸಂಘ ಸ್ಥಾಪಿಸಿದರು. ನಂತರ 1980 ಏಪ್ರಿಲ್ 6 ರಂದು ದೇಶದಲ್ಲಿ ಭಾರತೀಯ ಜನತಾ ಪಕ್ಷದ ಉದಯವಾಯಿತು. ಆರಂಭದಲ್ಲಿ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಪ್ರಸ್ತುತ 332 ಸಂಸದರನ್ನು ಹೊಂದಿ ದೇಶದ ಚುಕ್ಕಾಣಿ ಹಿಡಿದಿದೆ. ರಾಷ್ಟ್ರೀಯ ಚಿಂತನೆಗಳು ಮತ್ತು ಅಭಿವೃದ್ಧಿಯ ಮನ್ವಂತರಕ್ಕೆ ಸುಭದ್ರ ಬುನಾದಿಯನ್ನು ಹಾಕಿದ ಹಿರಿಯರನ್ನು ಈ ಸಂದರ್ಭದಲ್ಲಿ ಗೌರವಿಸುತ್ತಾ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆ.

ಬಿಜೆಪಿ, ಕಾರ್ಯಕರ್ತರ ಪಕ್ಷವಾಗಿ ಬೆಳೆದು ಬಂದಿದ್ದು, ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದ ವಾಗೀಶ್‌ಸ್ವಾಮಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಉತ್ತಮ ಆಡಳಿತದ ಮೂಲಕ ಜಗತ್ತಿನ ಗಮನ ಸೆಳೆದಿರುವುದು ಬಿಜೆಪಿಯ ಹೆಮ್ಮೆ ಎಂದರು.

ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಬ್ಬರು ಯಾವುದೇ ಲಾಬಿ ಇಲ್ಲದೆ ಅಧಿಕಾರ ಹಿಡಿಯುವುದು ಬಿಜೆಪಿಯಲ್ಲಿ ಮಾತ್ರ ಎಂದರು. ಬಿಜೆಪಿ ಮುಖಂಡ ಕೆ.ಜಿ. ವೀರನಗೌಡ್ರು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಪುರಸಭೆ ನಾಮಿನಿ ಸದಸ್ಯ ಜಿ.ಹೆಚ್. ಮಂಜಪ್ಪ ಮಾತನಾಡಿದರು. ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಲಕಟ್ಟೆ ಸಿದ್ದಪ್ಪ ಪ್ರಮುಖ ಭಾಷಣ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಹರಿಹರ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ಮಾತನಾಡಿ, ಬಿಜೆಪಿ ಹೆಮ್ಮರವಾಗಿ ಬೆಳೆದಿರುವುದರ ಹಿಂದೆ ಹಿರಿಯರ ಸಾಕಷ್ಟು ಶ್ರಮ ಮತ್ತು ಬಲಿದಾನ ಇದೆ. ಬಿಜೆಪಿ ಕಾರ್ಯಕರ್ತರಲ್ಲಿರುವ ಉತ್ಸಾಹ, ನಿಷ್ಠೆ, ಸಂಘಟನೆ ಬೇರೆ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ ಎಂದರು.

ಹರಿಹರ ತಾಲ್ಲೂಕಿನ ಮಲೇಬೆನ್ನೂರು, ಕುಂಬಳೂರು, ಸಿರಿಗೆರೆ, ಭಾನುವಳ್ಳಿ, ಬೆಳ್ಳೂಡಿ ಮತ್ತು ಕೊಂಡಜ್ಜಿ ಗ್ರಾಮಗಳನ್ನು ಬಿಜೆಪಿ ಶಕ್ತಿಕೇಂದ್ರಗಳೆಂದು ಗುರುತಿಸಿದ್ದು, ಎಲ್ಲಾ ಕಡೆ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಿದ್ದೇವೆ. ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕೆಂದು ಲಿಂಗರಾಜ್ ಮನವಿ ಮಾಡಿದರು.

ಪುರಸಭೆ ಸದಸ್ಯ ಬಿ. ಸುರೇಶ್, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಬಿ. ಚಂದ್ರಪ್ಪ, ಸದಸ್ಯ ಮುದೇಗೌಡ್ರ ತಿಪ್ಪೇಶ್, ಸಿರಿಗೆರೆ ಕುಮಾರ್, ದೊರೆ, ಸಂತೋಷ್, ಕೊಮಾರನಹಳ್ಳಿ ಸುನೀಲ್, ಇನ್ನಿತರರು ಭಾಗವಹಿಸಿದ್ದರು. ಪುರಸಭೆ ಸದಸ್ಯ ಪಿ.ಆರ್. ರಾಜು ಸ್ವಾಗತಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಿ. ಮಂಜುನಾಥ್ ನಿರೂಪಿಸಿದರು. ಬೆಣ್ಣೆಹಳ್ಳಿ ಬಸವರಾಜ್ ವಂದಿಸಿದರು.

Leave a Reply

Your email address will not be published.