ತಂದೆ – ತಾಯಿ ಮರೆತರೆ ಮಕ್ಕಳಿಗೆ ಭವಿಷ್ಯವಿಲ್ಲ

ತಂದೆ – ತಾಯಿ ಮರೆತರೆ ಮಕ್ಕಳಿಗೆ ಭವಿಷ್ಯವಿಲ್ಲ

ಮಲೇಬೆನ್ನೂರಿನಲ್ಲಿ ಶ್ರೀ ಶಾರದೇಶಾನಂದಜೀ

ಮಲೇಬೆನ್ನೂರು, ಏ.6 – ಮಕ್ಕಳು ತಂದೆ ತಾಯಿಯನ್ನು ಮರೆತರೆ  ಮುಂಬರುವ ಜೀವನದಲ್ಲಿ ಭವಿಷ್ಯವಿಲ್ಲ ಎಂದು ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದಜೀ ಮಹಾರಾಜ್  ಸಂದೇಶ ನುಡಿದರು.

ಅವರು ಸಮೀಪದ ಕುಣೆಬೆಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‍ ನಲ್ಲಿ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಶ್ರೀ ಯೋಗಾನಂದಜೀ ರವರ ಜಯಂತಿ ನಿಮಿತ್ತ 50 ಬಡ ಮಹಿಳೆಯರಿಗೆ ಪೌಷ್ಟಿಕ ಆಹಾರ ಹಾಗೂ ಮಕ್ಕಳಿಗೆ ಡ್ರೆಸ್ ವಿತರಿಸಿ, ಆಶೀರ್ವಚನ ನೀಡುತ್ತಾ ಮಕ್ಕಳು ದೊಡ್ಡವ ರಾದ ಬಳಿಕ ಹೆತ್ತವರನ್ನು ಮರೆಯಬಾರದು. 

ಹತ್ತನೇ ತರಗತಿಯಲ್ಲಿ ಶೇ 80 ರಷ್ಟು ಫಲಿತಾಂಶ ಪಡೆದ ಮೂವರು ಬಡ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಲು ಆಶ್ರಮ ನೆರವಾಗುತ್ತದೆ ಎಂದು ಹೇಳಿದರು.

ಡಾ.ಶಾರದಾದೇವಿ ಮಾತನಾಡಿ, ಬಸವೇಶ್ವರ ಕ್ಯಾಂಪ್‍ನಲ್ಲಿ ತಜ್ಞ ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ, ಎಲ್ಲರಿಗೂ ಉಚಿತ ಔಷಧಿಗಳನ್ನು ನೀಡಲಾಗುವುದು ಎಂದರು. ರಾಮಕೃಷ್ಣ ವಿವೇಕ ಆಶ್ರಮವು ಕಳೆದ ನೆರೆ ಹಾವಳಿಯಲ್ಲಿ ಹತ್ತು ಲಕ್ಷ ರೂ.ಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಬಟ್ಟೆ, ಹೊದಿಕೆ ಮತ್ತಿತರೆ ಆಹಾರಗಳನ್ನು ವಿತರಿಸಲಾಗಿದೆ ಎಂದು ಮೆಚ್ಚುಗೆಪಟ್ಟರು.

ಕೆನರಾ ಬ್ಯಾಂಕ್‌ನ ಪ್ರಮೋದ್ ಬೀಳಗಿ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ, ಜೀವನ್ ಭೀಮಾ ಹಾಗೂ ಅಟಲ್ ಪಿಂಚಣಿ ಯೋಜನೆಯ ವಿವರ ನೀಡಿದರು. 

ಕಂಪ್ಯೂಟರ್ ಕೇಂದ್ರದ  ನಾಗರತ್ನ ಅಂಬಾಸಾ ಮಾತನಾಡಿ, ಪ್ರತಿಭಾವಂತ ಮಕ್ಕಳಿಗೆ ಉಚಿತ ಗಣಕಯಂತ್ರ ಶಿಕ್ಷಣ ನೀಡಲು ಸಂಸ್ಥೆ ಬಯಸಿದೆ ಎಂದರು. ಗ್ರಾಮದ ಹರೀಶ್, ರವಿ, ಗಣೇಶ, ಚೈತ್ರ, ಮಧುಮತಿ, ಶೀಲಾ, ಶಾಂತಮ್ಮ ಅನಿಸಿಕೆ ಹೇಳಿಕೊಂಡರು. ದಾನಿಗಳಾದ ಶ್ರೀಧರ್ ಭೂತೆ, ಪತ್ರಕರ್ತ ಸದಾನಂದ ಹಾಜರಿದ್ದರು.

Leave a Reply

Your email address will not be published.