ಧಾರ್ಮಿಕ ಕೇಂದ್ರ ಸ್ವರೂಪ ನಿರ್ಬಂಧ ಪ್ರಶ್ನಿಸಿ ಸುಪ್ರಿಂನಲ್ಲಿ ಅರ್ಜಿ

ಪ್ರಾರ್ಥನಾ ಸ್ಥಳಗಳು 1947ರಲ್ಲಿದ್ದಂತೆ ಇರಬೇಕು ಎಂಬ ಕಾಯ್ದೆಗೆ ಆಕ್ಷೇಪ

ನವದೆಹಲಿ, ಮಾ. 12 – ದೇಶದಲ್ಲಿರುವ ಧಾರ್ಮಿಕ ಕೇಂದ್ರಗಳ ಸ್ವರೂಪವನ್ನು ಆಗಸ್ಟ್ 15, 1947ರಲ್ಲಿ ಇರುವುದಕ್ಕಿಂತ ಬದಲಾವಣೆ ತರದಂತೆ 1991ರಲ್ಲಿ ಶಾಸನ ರೂಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳಿಸಲಾಗಿದೆ.

1991ರ ಕಾಯ್ದೆ ಅತಾರ್ಕಿಕವಾಗಿದೆ. ಪೂರ್ವಾನ್ವಯವಾಗುವ ರೀತಿಯಲ್ಲಿ ಆಗಸ್ಟ್ 15, 1947ರ ಕಾಲಮಿತಿ ನಿಗದಿ ಪಡಿಸಲಾಗಿದೆ. ಇದು ಮೂಲಭೂತವಾದಿ ಬರ್ಬರ ದಾಳಿಕೋರರು ಹಾಗೂ ಕಾನೂನು ಮುರಿಯುವವರು ಮಾಡಿಕೊಂಡ ಒತ್ತುವರಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿದಂತೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ್ ಅವರು 1991ರ ಪ್ರಾರ್ಥನಾ ಸ್ಥಳ (ವಿಶೇಷ ಅವಕಾಶ) ಕಾಯ್ದೆಯ ಸೆಕ್ಷನ್ 2, 3, 4 ಪ್ರಶ್ನಿಸಿ ಅರ್ಜಿ ದಾಖಲಿಸಿದ್ದಾರೆ. ಈ ಕಾಯ್ದೆಯಿಂದಾಗಿ ಪ್ರಾರ್ಥನಾ ಸ್ಥಳವನ್ನು ವಾಪಸ್ ಪಡೆಯಲು ಇರುವ ನ್ಯಾಯಿಕ ಪರಿಹಾರವನ್ನು ಕಸಿದುಕೊಂಡಂತಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಕಾಯ್ದೆಯಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ ಒಂದಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಉಪಾಧ್ಯಾಯ್ ಪರವಾಗಿ ಹಿರಿಯ ವಕೀಲ ಗೋಪಾಲ ಸುಬ್ರಮಣ್ಯಂ ಅವರು ವಾದ ಮಂಡಿಸಿದ್ದಾರೆ.

ಮಥುರ ಹಾಗೂ ಕಾಶಿಯ ಜಾಗವನ್ನು ಹಿಂದೂಗಳಿಗೆ ಮರಳಿಸಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸುತ್ತಿವೆ. 1991ರ ಕಾಯ್ದೆ ಈ ಆಗ್ರಹಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಈ ಕಾಯ್ದೆಯು ಸಮಾನತೆ ಹಾಗೂ ಜೀವದ ಹಕ್ಕಿಗೆ ವಿರುದ್ಧವಾಗಿರುವುದಲ್ಲದೇ, ಸಂವಿಧಾನದ ಮುನ್ನುಡಿಯಲ್ಲಿರುವ ಸೆಕ್ಯೂಲರ್ ತತ್ವಕ್ಕೂ ವಿರುದ್ಧವಾಗಿದೆ ಹಾಗೂ ಸಂವಿಧಾನದ ಮೂಲ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Leave a Reply

Your email address will not be published.