ಜೀವನ ಹಿತ, ಪಾಲಿಕೆ ಕುಂಠಿತ : ಸುಲಲಿತ ಜೀವನ ಸಮೀಕ್ಷೆ: ರಾಜ್ಯದಲ್ಲಿ ದಾವಣಗೆರೆ ಪ್ರಥಮ

ನವದೆಹಲಿ, ಮಾ. 5 – ಸುಲಲಿತ ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಸುಲಲಿತ ಜೀವನ ನಿರ್ವಹಣೆ ಹಾಗೂ ನಗರ ಪಾಲಿಕೆಗಳ ಸಾಧನೆಯ ಸೂಚ್ಯಂಕದಲ್ಲಿ ದಾವಣಗೆರೆಗೆ ಮಿಶ್ರಫಲ ದೊರೆತಿದೆ.

55.25 ಅಂಕಗಳೊಂದಿಗೆ ಸುಲಲಿತ ಜೀವನ ನಿರ್ವಹಣೆ ವಿಭಾಗದಲ್ಲಿ ನಗರ ದೇಶದ 10 ಲಕ್ಷಕ್ಕೂ ಕಡಿಮೆ ಜನಸಂಖ್ಯೆಯ 62 ನಗರಗಳ ಪೈಕಿ ಒಂಭತ್ತನೇ ಸ್ಥಾನದಲ್ಲಿದೆ.

ಸುಲಲಿತ ಜೀವನದ ಸಮೀಕ್ಷೆಯಲ್ಲಿ ನಗರದ ನಾಗರಿಕರು ತಮಗೆ §ಹಿತಾನುಭವ¬ ಆಗಿದೆ ಎಂದು ಹೇಳಿದ್ದಾರೆ. ನಾಗರಿಕ ಅಭಿಪ್ರಾಯ ವಿಭಾಗದಲ್ಲಿ ನಗರ ಬರೋಬ್ಬರಿ 90.50 ಅಂಕ ಪಡೆದಿದೆ. 

ಆದರೆ, ಆರ್ಥಿಕ ಸಾಮರ್ಥ್ಯದಲ್ಲಿ ನಗರದ ಸಾಧನೆ ಅತ್ಯಂತ ಕಳಪೆಯಾಗಿದೆ. ನಗರದ ಆರ್ಥಿಕ ಸಾಮರ್ಥ್ಯದ ಅಂಕ ಕೇವಲ 2.15 ಆಗಿದೆ. ಈ ವಿಷಯದಲ್ಲಿ ನಗರ ಒಟ್ಟಾರೆ 56ನೇ ಸ್ಥಾನಕ್ಕೆ ಕುಸಿದಿದೆ. ಸುಸ್ಥಿರತೆ ವಿಷಯದಲ್ಲಿ 49.70 ಹಾಗೂ ಗುಣಮಟ್ಟದ ಜೀವನದಲ್ಲಿ 50.96 ಅಂಕಗಳನ್ನು ಪಡೆದಿದೆ. 

ಆದರೆ, ಇದೇ ವೇಳೆ ಮತ್ತೊಂದು ಸಮೀಕ್ಷೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸಾಧನೆ ಕಳಪೆಯಾಗಿದ್ದು ಕೇವಲ 36.83 ಅಂಕಗಳೊಂದಿಗೆ 46ನೇ ಸ್ಥಾನದಲ್ಲಿದೆ. ಪಾಲಿಕೆಯ ತಂತ್ರ ಜ್ಞಾನ ಬಳಕೆ ಹಾಗೂ ಯೋಜನೆಯಲ್ಲಿ ಕಡಿಮೆ ಅಂಕ ಗಳಿಸಿದೆ. ತಂತ್ರಜ್ಞಾನದಲ್ಲಿ 18.99 ಅಂಕ ಪಡೆದು 34ನೇ ಸ್ಥಾನದಲ್ಲಿದ್ದರೆ, ಯೋಜನೆಯಲ್ಲಿ 25.31 ಅಂಕಗಳೊಂದಿಗೆ 37ನೇ ಸ್ಥಾನದಲ್ಲಿದೆ.

ಸೇವೆಯಲ್ಲಿ 47.81, ಹಣಕಾಸಿನಲ್ಲಿ 45.82 ಮತ್ತು ಆಡಳಿತದಲ್ಲಿ 33.40 ಅಂಕಗಳನ್ನು ಪಡೆದಿದೆ.

2020ರಲ್ಲಿ ನಗರ ಆಡಳಿತ ಮಟ್ಟದ ಕುರಿತು ತಿಳಿಯಲು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಸುಲಲಿತ ಜೀವನ ಹಾಗೂ ಪಾಲಿಕೆ ಸಾಧನೆಯ ಕುರಿತು ಸಮೀಕ್ಷೆ ನಡೆಸಿತ್ತು. ಅದರ ಫಲಿತಾಂಶವನ್ನು ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಬಿಡುಗಡೆ ಮಾಡಿದ್ದಾರೆ. ಅದರ ಅನ್ವಯ ಸುಲಲಿತ ಜೀವನದಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗದಲ್ಲಿ ದಾವಣಗೆರೆಯು ಕರ್ನಾಟಕದಲ್ಲೇ ಮೊದಲ ಸ್ಥಾನ ಪಡೆದಿದೆ.

ಶಿಕ್ಷಣ, ಆರೋಗ್ಯ, ವಸತಿ, ಸಂಚಾರ, ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಆರ್ಥಿಕ ಅವಕಾಶ, ಪರಿಸರ, ಇಂಧನ ಬಳಕೆ ಸೇರಿದಂತೆ ಹಲವಾರು ವಿಷಯಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿತ್ತು.

ನಗರ ಪಾಲಿಕೆಗಳ ಸಾಧನೆಯನ್ನು ಅಳೆಯಲು ಶಿಕ್ಷಣ, ಆರೋಗ್ಯ, ಜಲ, ನೈರ್ಮಲ್ಯ, ಮೂಲಭೂತ ಸೌಲಭ್ಯ, ಕಂದಾಯ ನಿರ್ವಹಣೆ, ವಿತ್ತೀಯ ಹೊಣೆಗಾರಿಕೆ, ಹಣಕಾಸು ವಿಕೇಂದ್ರೀಕರಣ, ಡಿಜಿಟಲ್ ಆಡಳಿತ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಲಾಗಿತ್ತು.

Leave a Reply

Your email address will not be published.