ರಾಜ್ಯಮಟ್ಟದ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಲಿ

ರಾಜ್ಯಮಟ್ಟದ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಲಿ

ಜಗಳೂರಿನಲ್ಲಿ ಶಾಸಕ ರಾಮಚಂದ್ರಪ್ಪ ಆಶಯ

ಜಗಳೂರು, ಮಾ.2- ನಮ್ಮ ಕ್ಷೇತ್ರದ ವಿದ್ಯಾರ್ಥಿಗಳು ಸತತ ಸಾಧನೆ, ಪರಿಶ್ರಮದಿಂದ ರಾಜ್ಯಮಟ್ಟದ ಕ್ರೀಡಾಪಟುಗಳಾಗಿ  ಹೊರಹೊಮ್ಮಿ ತಾಲ್ಲೂಕಿನ ಕೀರ್ತಿ ಪತಾಕೆ ಹಾರಿಸಲಿ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಚಿನ್ಮಯ ಭಾರತಿ ಮೈದಾನದಲ್ಲಿ  ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ನಲಂದ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ  ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಿಯುಸಿ ಹಂತ ಭವಿಷ್ಯದ ಅಡಿಗಲ್ಲಾಗಿದ್ದು, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿ ಕೊಳ್ಳ ಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಆರ್ಥಿಕ ಕ್ಷೇತ್ರದಲ್ಲಿ ಹಿನ್ನೆಡೆಯಾಗಿರಬಹುದು, ಆದರೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅಗ್ರಸ್ಥಾನ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆ ಇಟ್ಟಿದೆ ಎಂದರು.

ದಿ. ಟಿ. ತಿಪ್ಪೇಸ್ವಾಮಿ ಅವರು ಬರದ ನಾಡಿನಲ್ಲಿ ಸ್ಥಾಪಿಸಿದ ಅಮರಭಾರತಿ ವಿದ್ಯಾಸಂಸ್ಥೆ ನಳಂದ ವಿಶ್ವವಿದ್ಯಾನಿಲಯದಂತೆ ರೂಪುಗೊಂಡು ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಆಶಾಕಿರಣ ಮೂಡಿಸಿ ವಿದೇಶಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಕ್ರೀಡಾಪಟುವಾಗಿ ಕ್ರೀಡೆಗಳಿಗೆ ಪ್ರೋತ್ಸಾಹ: ತಾಲ್ಲೂಕಿನಲ್ಲಿ ಕಳೆದ ವರ್ಷಗಳಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಕ್ರೀಡೆ ಆಯೋಜಿಸಿ ರಾಜ್ಯದಲ್ಲಿ ಸಂಚಲನ ಮೂಡಿಸಿರುವೆ. ನಾನೂ ಕೂಡ ರಾಜ್ಯಮಟ್ಟದ ಹಾಕಿ ಕ್ರೀಡಾಪಟು ವಾಗಿದ್ದು, ಸದಾ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತೇನೆ. ಕೋ ವಿಡ್ ಹಿನ್ನೆಲೆ ಈ ಬಾರಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡೆ ಆಯೋಜನೆ ಮಾಡಲು ವಿಳಂಬವಾಗಿದ್ದು, ಶೀಘ್ರದಲ್ಲಿ ಆಯೋಜಿಸಲಾಗುವುದು. ಅಲ್ಲದೇ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ಭರವಸೆ ನೀಡಿದರು.

ಸಿರಿಗೆರೆ ಶ್ರೀಗಳ ಆಶೀರ್ವಾದ ಮತ್ತು  ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಹಕಾರ ದಿಂದ ಶೀಘ್ರದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು, ಶೀಘ್ರದಲ್ಲಿಯೇ ಬರದನಾಡು ಹಸಿರು ನಾಡಾಗಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ  ಮಾತನಾಡಿದ ಪ್ರಾಂಶು ಪಾಲ ಜೆ.ಎಸ್. ಜ್ಯೋತಿ ಕ್ರೀಡೆಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿರಿ ಸ್ಪರ್ಧಾ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಮಾನಸಿಕ ಸದೃಢತೆಯ ಜೊತೆಗೆ ದೈಹಿಕ ಸದೃಢತೆ  ಅಗತ್ಯ ಎಂದು ಕಿವಿ ಮಾತು ಹೇಳಿ ದರು. ಇದೇ ವೇಳೆ ವಯೋ ನಿವೃತ್ತಿ ಹೊಂದು ತ್ತಿರುವ ಪ್ರಾಂಶುಪಾಲರಾದ ಜೆ.ಎಸ್. ಜ್ಯೋತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಜಗದೀಶ್, ಮಾರುತಿ, ಬಸವರಾಜ್,   ಉಪ ನ್ಯಾಸಕರುಗಳಾದ ಬಿ.ಎನ್‌.ಎಂ. ಸ್ವಾಮಿ, ಎ.ಪಿ.  ನಿಂಗಪ್ಪ, ಕರಿಬಸವರಾಜ್, ಸಿ. ತಿಪ್ಪೇಸ್ವಾಮಿ, ಬಸವರಾಜಯ್ಯ, ಜಿ.ಟಿ. ಪರಮೇಶ್ವರಪ್ಪ, ದೇವರಾಜ್, ಷಂಷುದ್ದೀನ್ , ಶಿವಕುಮಾರ್, ಜಗನ್ನಾಥ್, ಶಿವರಾಜ್ ಇನ್ನಿತರರಿದ್ದರು.

Leave a Reply

Your email address will not be published.