ಭವ್ಯ ರೈತ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಏಕೆ ?…

ಭವ್ಯ ರೈತ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಏಕೆ ?…

ರಿಯಾನಾ, ಗ್ರೇಟಥನ್ ಬರ್ಗ್, ಜಾನಕ್ಯೂಸೆಕ್, ಮಿಯಾ ಖಲೀಫಾ, ಬ್ರಿಟಿಷ್ ಗಾಯಕ ಬಲ್ಜಿತ್ ಸಿಂಗ್, ಜಗಮಿತ್ ಸಿಂಗ್ ಇವರೆಲ್ಲ ಯಾರು? ನಮ್ಮ ರೈತರ ಪರವಾಗಿ ಟ್ವೀಟ್ ಮಾಡುವ ನೈತಿಕತೆ ಏನಿದೆ? “ಹೊನ್ನ ಬಿತ್ತೇವು ಹೊಲಕ್ಕೆಲ್ಲ” ಎನ್ನುವ ರೈತರ ನುಡಿಗಟ್ಟಿನ ಅರ್ಥ ತಿಳಿದಿದೆಯೇ. 

ಇವರು ಖಲಿಸ್ತಾನಿಗಳೋ ಅಥವಾ ಖಲಿಸ್ತಾನಿಗಳ ಪರವಾಗಿ ಜಗತ್ತಿಗೆ ಭಾರತದಲ್ಲಿ ಏನೋ ನಡೆಯುತ್ತದೆ ಎಂದು ತೋರಿಸುವ ದುಷ್ಟ ಶಕ್ತಿಗಳೋ? ಸಂಭಾವನೆ ಪಡೆದು ಟ್ವೀಟ್ ಮಾಡುತ್ತಿರುವ ಇವರಿಗೆ ನಮ್ಮ ರಾಷ್ಟ್ರದ ರೈತ ಸಮುದಾಯದ ಬಗ್ಗೆ ಏನು ತಿಳಿದಿದೆ. ಪ್ರಚೋದನಕಾರಿ ಟ್ವೀಟ್ ಮಾಡುವುದರಿಂದ ನಮ್ಮ ದೇಶದ ಘನತೆ ಮತ್ತು ಒಗ್ಗಟ್ಟನ್ನು ಎಂದಿಗೂ ಹಾಳು ಮಾಡಲು ಆಗದು.

ರೈತರು ನಮ್ಮ ದೇಶದ ಬೆನ್ನೆಲುಬು, ಮುಖ್ಯ ಸಮುದಾಯ. ಅವರ ಸಮಸ್ಯೆಗಳ ನಿವಾರಣೆ, ಅವರನ್ನು ರಕ್ಷಿಸುವ ಜವಾಬ್ದಾರಿ ಇರುವುದು ನಮ್ಮ ಸರ್ಕಾರಗಳಿಗೆ ಹೊರತು, ಜಗತ್ತಿನ ಯಾವುದೋ ಮೂಲೆಯಲ್ಲಿರುವ ಪಾಪ್ ಹಾಡುಗಾರರಿಗಲ್ಲ. ಇಂತವರ ವಿಚ್ಛಿದ್ರಕಾರಿ ಟ್ವೀಟ್‌ಗಳನ್ನು ಪ್ರತಿಯೊಬ್ಬ ಭಾರತೀಯನು ಖಂಡಿಸಬೇಕು.

ಇವರ ವಿರುದ್ಧ ಹೋರಾಡಲು ಒಂದಾಗಬೇಕು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊಗೆ ನಮ್ಮ ದೇಶದ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಹುಚ್ಚು ಏಕೆ? ಕೆನಡಾದಲ್ಲಿಯಾಗಲೀ ಅಥವಾ ಟ್ವೀಟ್ ಮಾಡಿರುವ ತಾರೆಯರ ದೇಶದಲ್ಲಾಗಲೀ ತಮ್ಮ ದೇಶದ ಎಲೆಯಲ್ಲಿ ಸತ್ತು ಬಿದ್ದಿರುವ ಹೆಗ್ಗಣದ ಅರಿವಿಲ್ಲದೆ, ನೋಣವನ್ನು ಸಾಯಿಸಿ ನಮ್ಮ ಎಲೆಯಲ್ಲಿ ತಂದು ಹಾಕುವ ವ್ಯರ್ಥ ಪ್ರಯತ್ನವನ್ನು ನಡೆಸಿದ್ದಾರೆ. ನಿಜಕ್ಕೂ ಇದು ಹಾಸ್ಯಾಸ್ಪದ.

ಆದರೆ, ಇದರಲ್ಲಿ ನಮ್ಮ ರಾಷ್ಟ್ರದ ಐಕ್ಯತೆ-ಬಾಂಧವ್ಯವನ್ನು ಕದಡುವ, ಕೆಡಿಸುವ ಚಿಂತನೆಗಳು ಅಡಗಿವೆ. 

ಭಾರತದಲ್ಲಿ ಏನೋ ಆಗಿ ಹೋಗಿದೆ ಎಂದು ತೋರಿಸುವ ನೀತಿಗೆಟ್ಟ ಷಡ್ಯಂತ್ರಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಖಂಡಿಸಬೇಕಿದೆ. ಅಷ್ಟೇ ಅಲ್ಲ ಕುವೆಂಪು ಅವರು ಹೇಳಿದ ಹಾಗೆ “ಸತ್ತಂತಿಹರನು ಬಡಿದೆಚ್ಚರಿಸಬೇಕಾಗಿದೆ”.

ಮುಂದೊಮ್ಮೆ ಭಾರತದ ಒಗ್ಗಟ್ಟನ್ನು ಒಡೆಯುವ ಸಂಚು ಎಂದೂ ಫಲಿಸುವುದಿಲ್ಲ. ನಾವೆಲ್ಲರೂ ಒಂದೇ, ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ಬೇರೆಯರ ಹಸ್ತಕ್ಷೇಪದ ಅವಶ್ಯಕತೆ ಇಲ್ಲ. ಮಹಾಭಾರತದಲ್ಲಿ ಧರ್ಮರಾಯ ಹೇಳಿದ ಹಾಗೆ ಹಸ್ತಿನಾಪುರದ ಮೇಲೆ ಯಾರಾದರೂ ಯುದ್ಧ ಮಾಡಿದರೆ, ಅಣ್ಣ-ತಮ್ಮಂದಿರಾದ ನಾವು ಕೌರವ-ಪಾಂಡವರು ಒಂದಾಗಿ ಯುದ್ಧ ಮಾಡುತ್ತೇವೆ ಎಂಬುದನ್ನು ಉಲ್ಲೇಖಿಸಬೇಕಾಗಿದೆ.

ಸ್ವಾತಂತ್ರ್ಯ  ಬಂದ ನಂತರ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ರೈತರ ಪರವಾಗಿಯೇ ಕೆಲಸ, ಕಾಯಿದೆಗಳನ್ನು ಮಾಡಿಕೊಂಡು  ಬಂದಿವೆ. ರಾಷ್ಟ್ರದ ಪ್ರಗತಿ ಕಾರ್ಯದಲ್ಲಿ ಕೆಲವೊಂದು ಬದಲಾವಣೆ ಅವಶ್ಯ ಮತ್ತು ಅನಿವಾರ್ಯ. ಇಲ್ಲದಿದ್ದಲ್ಲಿ ಮಾಡಿದ್ದನ್ನೇ ಮಾಡಿದಲ್ಲಿ ಪ್ರಗತಿ ಹೇಗೆ ಸಾಧ್ಯ?… ಬ್ರಿಟೀಷರು ಮಾಡಿದ ಕಾಯಿದೆ “ತುಂಡು ಭೂಮಿ ರೈತ ನೀನು ಬೆಳೆದ ಬೆಳೆಗೆ ಬೆಲೆ ಕಟ್ಟುವವರು ನಾವೇ, ಕೊಳ್ಳುವವರು ನಾವೇ” ಎಂದರೆ, ಅದನ್ನೇ ನಾವು ಉಳಿಸಿಕೊಂಡು ಹೋಗಬೇಕೇ? ಪ್ರಯತ್ನ, ಪ್ರಯೋಗ, ಸೃಜನ ಶೀಲತೆ, ದೂರದೃಷ್ಟಿ, ಯೋಚನೆ ಮತ್ತು ಯೋಜನೆಗಳು ಆಡಳಿತ ಪಕ್ಷದ ಹೊಣೆ. ಜನತೆಯ ಕ್ಷೇಮಾಭಿವೃದ್ಧಿ, ರೈತರ ಕಾಳಜಿ, ರಾಷ್ಟ್ರದ ಐಕ್ಯತೆ -ಬಾಂಧವ್ಯ, ರಾಷ್ಟ್ರದ ರಕ್ಷಣೆ, ವಿದ್ಯೆ-ಉದ್ಯೋಗ ಚಿಂತನೆಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿಗಳು.

ಪ್ರಸ್ತುತ ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ತಂದಿದ್ದು, ಅವುಗಳ ಅನುಷ್ಠಾನಕ್ಕೆ ರೈತರ ಜೊತೆಯಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈಗಾಗಲೇ ಹಲವು ಬಾರಿ ರೈತರ ಜೊತೆಯಲ್ಲಿ ಮಾತುಕತೆ ಮಾಡಿರುತ್ತದೆ. 

ಅಲ್ಲದೇ ಹೊಸ ಕೃಷಿ ಕಾಯಿದೆಗಳನ್ನು ಅಮಾನತ್ತಿನಲ್ಲಿಟ್ಟು ರೈತ ಸಂಘಟನೆಗಳ ಜೊತೆ ಮಾತನಾಡುವ ಮುಕ್ತ ಅವಕಾಶವನ್ನು ನೀಡಿರುತ್ತದೆ.

“ಬೆಳೆಯ ಭೂಮಿಯಲ್ಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು ಎನ್ನುವ ಗುಣವೆಂಬ ಕಸವ ಕಿತ್ತು
ಸಲಹಯ್ಯಾ, ಲಿಂಗತಂದೆ ಸುಳಿದೆಗೆದು ಬೆಳೆವೆನು

ಕೂಡಲಸಂಗಮದೇವಾ”

ಹುಲುಸಾಗಿ ಬೆಳೆದ ಭವ್ಯ ರೈತ ಭಾರತದಲ್ಲಿ ಇಂತಹ ಕಳೆ ಚಿಗುರಲು ಬಿಡಬಾರದು, ಬೇರು ಸಹಿತ ಕಿತ್ತೊಗೆಯಬೇಕು. ಆಗ ಮಾತ್ರ ಕೃಷಿ ಪ್ರಧಾನ ಭಾರತ ದೇಶ ಬೆಳೆಯಲು ಸಾಧ್ಯ, ಬೆಳಗಲು ಸಾಧ್ಯ.


ಹೆಚ್.ಎನ್. ಶಿವಕುಮಾರ್
ಮಾಜಿ ಸದಸ್ಯರು, ಮಹಾನಗರ ಪಾಲಿಕೆ
ದಾವಣಗೆರೆ.
ಮಾಜಿ ಸೆನೆಟ್ ಮತ್ತು ಸಿಂಡಿಕೆಟ್ ಸದಸ್ಯರು, ಕುವೆಂಪು ವಿಶ್ವವಿದ್ಯಾನಿಲಯ

Leave a Reply

Your email address will not be published.