ಪ್ರಜಾ ಶಕ್ತಿಗೆ ಬಲ ತುಂಬಿಸುವ ಕೆಲಸ ಸಾಗಿದೆ

ಪ್ರಜಾ ಶಕ್ತಿಗೆ ಬಲ ತುಂಬಿಸುವ ಕೆಲಸ ಸಾಗಿದೆ

ಕೊಟ್ಟೂರು ತಹಶೀಲ್ದಾರ್ ಜಿ. ಅನಿಲ್‍ಕುಮಾರ

ಕೊಟ್ಟೂರು, ಜ.26- ಪ್ರಜಾ ಶಕ್ತಿಗೆ ಬಲ ತುಂಬಿಸಿದ  ಸಂವಿಧಾನದ ಆಶಯಗಳನ್ನು ಸರ್ಕಾರ ಜಾರಿಗೆಗೊಳಿಸುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ತಾಲ್ಲೂಕು ಮಟ್ಟದ ಗಣರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ವನ್ನು ನೆರವೇರಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ಮಾದರಿಯಾದ ರಾಷ್ಟ್ರದ ಸಂವಿಧಾನ ಪ್ರತಿಯೊಬ್ಬರ ಹಕ್ಕನ್ನು ರಕ್ಷಿಸುವುದಲ್ಲದೆ, ಸರ್ವ ರಂಗದಲ್ಲಿ ಪ್ರಗತಿಯನ್ನು ಕಾಣುವುದೇ ಪ್ರಮುಖ ಅಂಶವಾಗಿದೆ.  ಎಲ್ಲರೂ  ಸದೃಢ ರಾಷ್ಟ್ರ ಕಟ್ಟುವ ಕೆಲಸದಲ್ಲಿ  ಸಂಪೂರ್ಣ ಕೈಜೋಡಿಸುವತ್ತ ಮುಂದಾಗಬೇಕು ಎಂದು ಅವರು  ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಯಾರೊಬ್ಬರು ನಡೆದುಕೊಳ್ಳಬಾರದು. ಅಧಿಕಾರ ಹೊಂದಿದವರು  ಸರ್ವರ ಪ್ರಗತಿಗೆ ಶ್ರಮಿಸಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವೇಚ್ಛಾಚಾರದ ನಡವಳಿಕೆ ಸಲ್ಲದು. ಯಾರೊಬ್ಬರೂ ಪ್ರಗತಿಯಿಂದ ಹಿಂದೆ ಬೀಳದಂತೆ ಗಮನ ಹರಿಸಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದರು. 

ಪಥಸಂಚಲನ ನಡೆಸಿದ ಪೊಲೀಸ್, ಗೃಹ ರಕ್ಷಕ ಎನ್.ಸಿ.ಸಿ ಸ್ಕೌಟ್ಸ್, ಶಾಲಾ ವಿದ್ಯಾರ್ಥಿಗಳ ತುಕಡಿಗಳ ತಂಡಗಳು ನೀಡಿದ ಗೌರವ ರಕ್ಷೆಯನ್ನು ತಹಶೀಲ್ದಾರ್ ಜಿ. ಅನಿಲ್‍ಕುಮಾರ, ಶಾಸಕ ಎಸ್.ಭೀಮಾನಾಯ್ಕ, ಸ್ವೀಕರಿಸಿದರು. 

ಪತ್ರಕರ್ತ ಭೀಮಣ್ಣ ಗಜಾಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.

ಜಿ.ಪಂ.ಸದಸ್ಯ ಎಂ.ಎಂ.ಜೆ ಹರ್ಷವರ್ಧನ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಮೂರ್ತಿ ಶ್ಯಾನುಭೋಗರ, ತಾ.ಪಂ. ಸದಸ್ಯರಾದ ಕೋಚಾಲಿ ಸುಶೀಲಮ್ಮ ವೆಂಕಟೇಶನಾಯ್ಕ, ಅಕ್ಕಮ್ಮ, ಪ.ಪಂ. ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್, ಕಾಂಗ್ರೆಸ್ ಮುಖಂಡ ಪಿ.ಹೆಚ್. ದೊಡ್ಡರಾಮಣ್ಣ, ಪ.ಪಂ. ಸದಸ್ಯ ಜಗದೀಶ, ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ದೊಡ್ಡಣ್ಣ, ಪ.ಪಂ. ಮುಖ್ಯಾಧಿಕಾರಿ ಹೆಚ್.ಎನ್. ಗೀರೀಶ್  ಇನ್ನಿತರ ಅಧಿಕಾರಿಗಳು ಹಾಗೂ  ಗಣ್ಯರು ವೇದಿಕೆಯಲ್ಲಿದ್ದರು. 

ಸರ್ಕಾರಿ ಬಾಲಕರ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ. ಬಸವರಾಜ ಸ್ವಾಗತಿಸಿದರು. ಶಿಕ್ಷಕ ಜೆ.ಎಂ. ಮನೋಹರ ಸ್ವಾಮಿ ನಿರೂಪಿಸಿದರು.