ಯುವ ಜನತೆಯಲ್ಲಿ ಉತ್ತಮ ಕನಸು ಬಿತ್ತುವ ಹಂಬಲ ಕುವೆಂಪು ಅವರಲ್ಲಿತ್ತು: ದಾರುಕೇಶ್

ಯುವ ಜನತೆಯಲ್ಲಿ ಉತ್ತಮ ಕನಸು ಬಿತ್ತುವ ಹಂಬಲ ಕುವೆಂಪು ಅವರಲ್ಲಿತ್ತು: ದಾರುಕೇಶ್

ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಮಾನವ ದಿನಾಚರಣೆ

ದಾವಣಗೆರೆ, ಡಿ.31- ಯುವ ಜನತೆಯಲ್ಲಿ ಸನ್ನಡತೆ, ಉತ್ತಮ ಕನಸುಗಳನ್ನು ಬಿತ್ತುವ ಹಂಬಲ ಕುವೆಂಪು ಅವರದ್ದಾಗಿತ್ತು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಬಿ.ಎಂ. ದಾರುಕೇಶ್ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ವಿಜ್ಞಾನ ಕೇಂದ್ರ, ಯುವ ಸ್ಪಂದನ ಕೇಂದ್ರ ಹಾಗೂ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರು ವಿಶ್ವಮಾನವರಾಗಿ ಬೆಳೆದರು. ಕನ್ನಡ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವ ಜನತೆಯೂ ವಿಶ್ವಮಾನವರಾಗಿ ಬಾಳಬೇಕು ಎಂದು ಕರೆ ನೀಡಿದರು.

ಯಾವುದೇ ರೀತಿಯ ನಾಟಕ, ಬೂಟಾಟಿಕೆ ಇಲ್ಲದೆ, ನಿಷ್ಕಲ್ಮಶ ಮನಸ್ಸಿನ ಕುವೆಂಪು ಅವರು ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ಬದುಕಿ ಬಾಳಿದ್ದಾಗಿ ಹೇಳಿದರು.

ಕೃಷಿ ಎಲ್ಲರ ಜೀವನಾಡಿ, ರೈತ ದೇಶದ ಬೆನ್ನೆಲುಬು ಎಂಬುದನ್ನರಿತಿದ್ದ ಕುವೆಂಪು, ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದರು. ಅದರೊಟ್ಟಿಗೆ ಸಾಹಿತ್ಯ ಕೃಷಿಯಲ್ಲೂ ಸಾಧನೆಗೈದು ಮಾದರಿಯಾಗಿದ್ದಾರೆ ಎಂದರು.

ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್ ಮಾತನಾಡುತ್ತಾ,  ಯುಗದ ಕವಿ, ಜಗದ ಕವಿ, ವಿಶ್ವಮಾನವರಾಗಿ ಬಾಳಿದ ಕುವೆಂಪು ಅವರು ಜನಿಸಿದ್ದ ನಾಡಿನಲ್ಲಿಯೇ ನಾವೂ ಜನಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ತಂತ್ರಜ್ಞಾನ ಇರದ ಕಾಲದಲ್ಲಿಯೂ ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದ ಕುವೆಂಪು, ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಗುರಿಯಾಗಬೇಕಾಯಿತು ಎಂದು ಹೇಳಿದರು.

ಹಿಂದೆ ಯುವಕರ ಮುಂದೆ ಗುರಿ ಹಾಗೂ ಹಿಂದೆ ಗುರು ಇರುತ್ತಿದ್ದರು. ಆದರೆ ಇಂದಿನ ಯುವ ಜನತೆಗೆ ಗುರಿ ಹಾಗೂ ಗುರು ಎರಡೂ ಇಲ್ಲವಾಗಿದೆ. ಕುವೆಂಪು ಅವರು ಯುವ ಸಮೂಹದ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಅವರ ಪುತ್ರ ಪೂರ್ಣ ಚಂದ್ರ ತೇಜಸ್ವಿ ಸಹ ತಂದೆಗೆ ತಕ್ಕ ಮಗನಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ್ದರು ಎಂದರು.

ಎಂ.ಎಂ. ಕಾಲೇಜು ಪ್ರಾಚಾರ್ಯ ಡಾ.ಕೆ.ಟಿ. ನಾಗರಾಜನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವಮಾನವ ಮಂಟಪ ಸಂಸ್ಥಾಪಕ ಆವರಗೆರೆ ರುದ್ರಮುನಿ, ಕುಂದುವಾಡ ಸ.ಪ.ಪೂ. ಕಾಲೇಜು ಉಪನ್ಯಾಸಕ ಅಂಗಡಿ ಸಂಗಪ್ಪ, ಬಿಐಇಟಿ ಆಂಗ್ಲಭಾಷಾ ಉಪನ್ಯಾಸಕಿ ಎ.ಹೆಚ್. ಸುಗ್ಲಾದೇವಿ, ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚಕಿ ಎಸ್.ಬಿ. ಶಿಲ್ಪ, ರಾಜ್ಯ ವಿಜ್ಞಾನ ಪರಿಷತ್ ನಿಕಟಪೂರ್ವ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.