ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆಲುವು ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚನ್ನಗಿರಿಯಲ್ಲಿ  ಕಾಂಗ್ರೆಸ್ ಗೆಲುವು  ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚನ್ನಗಿರಿ, ಡಿ.31- ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಚನ್ನಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದ ಕಾರಣ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. 

ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಅವರು,  ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂದು  ಅಭಿಪ್ರಾಯ ಪಟ್ಟರು. 

ಚನ್ನಗಿರಿ ತಾಲ್ಲೂಕಿನ 46 ಗ್ರಾಮ ಪಂಚಾಯ್ತಿಗಳಲ್ಲಿ 45 ರಲ್ಲಿ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದು  ನಮ್ಮ ಹೋರಾಟ ಹಾಗೂ ಕಾರ್ಯಕರ್ತರ ಪರಿಶ್ರಮಕ್ಕೆ ಸಿಕ್ಕ ಜಯವಾಗಿದೆ. ಈ ಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜನರು ಬೆಂಬಲಿಸಿದ್ದಾರೆ. ದೇಶದಲ್ಲಿ ಬಿಜೆಪಿ ವಿರುದ್ಧ ಅಲೆ ಎದ್ದಿದ್ದು ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದರು.

ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಜನರು ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆನೆ ಬಲ ಬಂದಂತಾಗಿದೆ ಎಂದು ಬಸವರಾಜ್ ಹೇಳಿದರು.

ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಮಾಡಿದ ಜನಪರ ಸೇವೆಗೆ ಮತದಾರರು ಒಪ್ಪಿ ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಿದ್ದಾರೆ. ದೇಶದಲ್ಲಿ ಬಿಜೆಪಿ ವಿರುದ್ಧ ಅಲೆಯಿದ್ದು, ಇದು ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಸಾಬೀತಾಗಿದೆ ಎಂದರು. ಆದರೂ ನಮ್ಮ ಹೋರಾಟ ಹಾಗೂ ಗುರಿ ಮುಂದಿನ ವಿಧಾನಸಭಾ ಚುನಾವ ಣೆಯಾಗಿದ್ದು, ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವವರೆಗೂ ಹೋರಾಟ ಮುಂದುವರೆಯುತ್ತದೆ. ಹಗಲಿರುಳು ಪಕ್ಷಕ್ಕಾಗಿ ಕಾರ್ಯಕರ್ತ ರೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ  ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಕೈ ಬಲಪಡಿಸುವೆ ಎಂದರು. 

ಈ ನಡುವೆ  ಕಾಂಗ್ರೆಸ್ ಬೆಂಬಲಿತರ ಪರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡಿರುವ ಹಾಗೂ ಜಿಲ್ಲಾ ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೆಸ್ ಮುಖಂಡರಿಗೆ  ಬಸವರಾಜು ಶಿವಗಂಗಾ ಕೃತಜ್ಞತೆ ಸಲ್ಲಿಸಿದರು.