ಕೊರೊನಾ : ಸಾರ್ವಜನಿಕರು ಎಚ್ಚರ ವಹಿಸುವಲ್ಲಿ ಒತ್ತು ನೀಡಬೇಕು

ಕೊರೊನಾ : ಸಾರ್ವಜನಿಕರು ಎಚ್ಚರ ವಹಿಸುವಲ್ಲಿ ಒತ್ತು ನೀಡಬೇಕು

ಹೊನ್ನಾಳಿ, ನ.4- ಕೊರೊನಾ ಸೋಂಕು ಹರಡದಿರುವಂತೆ ಸಾರ್ವಜನಿಕರು ಎಚ್ಚರಿಕೆ  ವಹಿಸುವಲ್ಲಿ ಒತ್ತು ನೀಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರೂ ಆದ `ಜನತಾವಾಣಿ’ ವರದಿಗಾರ ಹೆಚ್.ಸಿ.ಮೃತ್ಯುಂಜಯ ಪಾಟೀಲ್ ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಆದರೆ, ಇದನ್ನು ಲಘುವಾಗಿ ಪರಿಗಣಿಸಬಾರದು. ಏಕೆಂದರೆ, ಕೊರೊನಾ ಎರಡನೇ ಅಲೆ ಅಪ್ಪಳಿಸುವ ಭೀತಿ ಇದೆ. ಈಗಾಗಲೇ ಐರೋಪ್ಯ ರಾಷ್ಟ್ರಗಳು ಕೊರೊನಾ ಎರಡನೇ ಅಲೆಗೆ ತತ್ತರಿಸಿವೆ. ಹಲವಾರು ರಾಷ್ಟ್ರಗಳು ಎರಡನೇ ಹಂತದ ಲಾಕ್‍ಡೌನ್ ಘೋಷಿಸಿವೆ. ಹಾಗಾಗಿ, ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಪ್ಪಳಿಸುವ ಭೀತಿ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

 ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಶ್ರೀನಿವಾಸ್ ಮಾತನಾಡಿ, ಕೊರೊನಾ ಭೀಕರತೆ ಇನ್ನೂ ನಮಗೆ ಅರ್ಥವಾಗಿಲ್ಲ. ಈ ಕಾರಣದಿಂದಾಗಿಯೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕಿನ ಸಂಖ್ಯೆಯಲ್ಲಿ ಇಳಿಕೆ ಆಗಿದೆ ಎಂದು ನಾವು ಸಂಭ್ರಮಿಸುವ ಅಗತ್ಯವಿಲ್ಲ. ಕೊರೊನಾ ಟೆಸ್ಟ್ ಪ್ರಮಾಣದಲ್ಲಿ ಇಳಿಕೆ ಆಗಿರುವುದೂ ಗಮನಾರ್ಹವಾಗಿದೆ. ಅಲ್ಲದೇ, ಕೊರೊನಾ ಎರಡನೇ ಅಲೆ ಭೀತಿ ಇದೆ ಆತಂಕ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರುಗಳಾದ ಎನ್.ಕೆ. ಆಂಜನೇಯ, ಯು.ಬಿ. ಜಯಪ್ಪ,   ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಹೆಚ್.ಕೆ.ಮಲ್ಲೇಶ್, ಕೋರಿ ಯೋಗೀಶ್ ಕುಳಗಟ್ಟೆ ಮತ್ತಿತರರು ಮಾತನಾಡಿದರು.

ಸಂಘದ ಖಜಾಂಚಿ ಚನ್ನೇಶ್ ಬಿ.ಇದರಮನಿ, ಪತ್ರಕರ್ತ ಎಲ್.ಹೆಚ್. ರಾಘವೇಂದ್ರರಾವ್, ಪತ್ರಿಕಾ ವಿತರಕರಾದ ಚಂದ್ರಪ್ಪ, ನಿರಂಜನ, ಚಿನ್ಮಯ ಎಂ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಸ್ಕ್‍ಗಳನ್ನು ಧರಿಸದ ಸಾರ್ವಜನಿಕರಿಗೆ ಹೊನ್ನಾಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಚಿತವಾಗಿ ಎರಡು ಸಾವಿರ ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಲಾಯಿತು.

Leave a Reply

Your email address will not be published.