ಕೋವಿಡ್-19 ಗೆ ಧೈರ್ಯವೇ ಮೊದಲ ಮದ್ದು. ಭಯ, ಉದಾಸೀನವೇ ಶತ್ರು

ಮಾನ್ಯರೇ, 

ಪ್ರಪಂಚಾದ್ಯಂತ ಕೋವಿಡ್-19 ರಿಂದ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಆತಂಕಪಡುವ ವಿಷಯವೇನೆಂದರೆ ನಗರದಲ್ಲಿ ಪ್ರತಿದಿನ 200 – 300 ಪಾಸಿಟಿವ್ ಕೇಸ್ ಗಳು ಬರುತ್ತಿವೆ. 

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ನಮ್ಮ ಜಿಲ್ಲೆಯಲ್ಲಿ ಹೆಚ್ಚಿದೆ. ಇದಕ್ಕೆ ಕಾರಣ ರೋಗದ ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ಬರದೇ ಉದಾಸೀನ ತೋರಿಸುತ್ತಿರುವುದು ಹಾಗೂ ಪಾಸಿಟಿವ್ ಬಂದರೆ ನಮ್ಮ ನೆರೆಹೊರೆಯವರು ನಮ್ಮನ್ನು ಕೀಳರಿಮೆಯಿಂದ ನೋಡುತ್ತಾರೆ ಎಂಬ ಭಾವನೆಯೇ ಇಂದು ಈ ಮಟ್ಟದ ಅನಾಹುತಕ್ಕೆ ದಾರಿಯಾಗಿದೆ.

ಕೋವಿಡ್-19 ಬಂದರೆ ಆತಂಕಪಡುವ ಅವಶ್ಯಕತೆ ಇಲ್ಲ. ವೈದ್ಯರ ಬಳಿ ಬಂದರೆ ಸೂಕ್ತ ಚಿಕಿತ್ಸೆ ನೀಡಿ ರೋಗ ಗುಣಪಡಿಸುವ ಎಲ್ಲಾ ಸಾಧ್ಯತೆಗಳಿದ್ದು, ಜಿಲ್ಲೆಯ ವೈದ್ಯರುಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಿಮ್ಮಗಳ ಸೇವೆ ಮಾಡಲು ಸದಾ ಸಿದ್ಧರಿದ್ದಾರೆ. ಪಾಸಿಟಿವ್ ಬರುವುದು ಅಪರಾಧವಲ್ಲ. ಬಂದರೆ ಆತಂಕಪಡುವ ಅವಶ್ಯಕತೆಯೂ ಇಲ್ಲ. ಸಾರ್ವಜನಿಕರು ಸಹ ಪಾಸಿಟಿವ್ ಬಂದಂತಹ ವ್ಯಕ್ತಿಗಳನ್ನು, ಅವರ ಕುಟುಂಬದವರನ್ನು ಗೌರವದಿಂದ ಕಂಡು ಅವರಿಗೆ ಆತ್ಮಸ್ಥೈರ್ಯ ನೀಡಿದರೆ ಅವರಿಗೆ ಅರ್ಧ ಗುಣವಾದಂತೆ.

90 ವರ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಗುಣ ಮುಖರಾಗಿದ್ದಾರೆ ಎಂದರೆ, ಇನ್ನುಳಿದ ನಾವುಗಳು ಏಕೆ ಭಯಪಡಬೇಕು? ಅವರೇ ನಮಗೆ ಸ್ಫೂರ್ತಿ. ಆದ್ದರಿಂದ ರೋಗದ ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ಬರಬೇಕು ಹಾಗೂ ವೈದ್ಯರು ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು ಮತ್ತು ನೆರೆಹೊರೆಯವರು ಸ್ನೇಹಿತರು ಸಂಬಂಧಿಕರು ಅವ ರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತುಂಬಿ ಬೆನ್ನೆಲುಬಾಗಿ ನಿಲ್ಲಬೇಕು. ಎಲ್ಲರೂ ಒಟ್ಟಾಗಿ ಕೋವಿಡ್-19 ಓಡಿಸುವಲ್ಲಿ ಕೈ ಜೋಡಿಸೋಣ.

– ಕೆ.ಎಲ್. ಹರೀಶ್, ಬಸಾಪುರ.

Leave a Reply

Your email address will not be published.