ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿಗೆ ಆಗ್ರಹ

ಸ್ಲಂ ನಿವಾಸಿಗಳ ಪ್ರತಿಭಟನೆ 

ದಾವಣಗೆರೆ, ಜು.30 – ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸ ಬೇಕೆಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಲಂನಲ್ಲಿರುವ ಬಡ ಜನರು ಹಾಗೂ ಸ್ಲಂ ನಿವಾಸಿಗಳು ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗ ಸಿಗದೆ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಇದರಿಂದಾಗಿ ಶೇ 70 ಕ್ಕೂ ಹೆಚ್ಚು ಜನರು ದುಡಿಯುವ ಅಸಂಘಟಿತ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಹೆಚ್ಚಾಗಿ ದಿನಗೂಲಿ ಮಾಡುವವರು ಸಂಕಷ್ಟ ದಲ್ಲಿದ್ದಾರೆ. ಬೀದಿ ಬದಿಯ ವ್ಯಾಪಾರ ಮಾಡುವವರು, ಛತ್ರಗಳಲ್ಲಿ ಸ್ವಚ್ಚತೆ ಮಾಡುವವರು, ಚಿಂದಿ ಸಂಗ್ರಹಿಸಿ ನಗರದ ಸ್ವಚ್ಚತೆ ಕೆಲಸ ಮಾಡುವವರು, ಗಾರ್ಮೆಂಟ್, ಕಟ್ಟಡ, ವಲಸೆ ಕಾರ್ಮಿಕರು, ಮನೆಗೆಲಸದವರು ಸೇರಿದಂತೆ ಅನೇಕರು ಕಳೆದ ನಾಲ್ಕು ತಿಂಗಳಿನಿಂದ ಉದ್ಯೋಗವಿಲ್ಲದೇ ಜಿವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಸರ್ಕಾರ ಕೋವಿಡ್-19 ಬಂಧನ ಸಡಿಲಗೊಳಿಸಿದೆ ಆದರೆ ಸ್ಲಂ ವಾಸಿಗಳನ್ನು ಜನರು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಜಾರಿ ಮಾಡಿದಂತೆ ನಗರ ಪ್ರದೇಶಗಳಲ್ಲೂ ಜಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಎಂ. ಶಬ್ಬೀರ್ ಸಾಬ್, ರೇಣುಕ ಯಲ್ಲಮ್ಮ, ಹೆಚ್.ಬಸವರಾಜ್, ಬಾಲಪ್ಪ, ಕಣಿವೆ ಮಾರಕ್ಕ, ಬಾಷಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.