ಕೊರೊನಾ ರೋಗಕ್ಕಿರುವ ಚಿಕಿತ್ಸಾ ಕ್ರಮಗಳು

ಕೊರೊನಾ ರೋಗವು ತನ್ನ ಅಟ್ಟಹಾಸವನ್ನು ಮುಂದುವರೆಸಿರುವುದು ನಮಗೆಲ್ಲರಿಗೂ ತಿಳಿದಿದೆ.
ಈ ರೋಗದಿಂದ ನಮ್ಮ ಸಮಾಜದ ಮೇಲೆ ಬಹಳಷ್ಟು ವ್ಯತಿರಿಕ್ತವಾದ ಪರಿಣಾಮಗಳಾಗುತ್ತಿವೆ.
ಈ ರೋಗವನ್ನು ತಡೆಗಟ್ಟುವ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿಸುವ ಪ್ರಯತ್ನ.

1. ಕೊರೊನಾ ರೋಗ ವೇಗವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ?

ಕೊರೊನಾ ರೋಗಾಣು ಕೆಮ್ಮಿದಾಗ, ಸೀನಿದಾಗ ಬರುವ ತೇವಭರಿತ ತುಣುಕುಗಳಲ್ಲಿ ಅಡಗಿದ್ದು, ಈ ತುಣುಕುಗಳನ್ನು ಉಸಿರಾಟದ ಮೂಲಕ ಸೇವಿಸುವುದರಿಂದ ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಈ ರೋಗ ಹರಡುವುದನ್ನು ತಡೆಯಲು, ಅನುಸರಿಸಬೇಕಾದ ಕ್ರಮಗಳು : ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಅಂತರ ಕಾಯ್ದು ಕೊಳ್ಳುವುದು, ವ್ಯಾಯಾಮ ಮತ್ತು ಯೋಗ ಮಾಡುವುದು, ಉತ್ತಮ ಆಹಾರ, ತರಕಾರಿ, ಹಣ್ಣು ಮತ್ತು ಮಾಂಸಹಾರ ಇತರೆ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ಸ್ವಚ್ಚತೆ ಕಾಪಾಡಿಕೊಳ್ಳುವುದು, ಗುಂಪು ಕಟ್ಟದಿರುವುದು. ಆತಂಕದಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹಾಗಾಗಿ, ಭಯಪಡದಿರುವುದು.

2. ಡಿಸೆಂಬರ್ ಹೊತ್ತಿಗೆ ಶೇ. 50 ಭಾರತೀಯರು ಸೋಂಕಿತರಾಗುತ್ತಾರೆಂದು ಅಂದಾಜಿದೆ? ಇದಕ್ಕೆ ಹೆದರಬೇಕೆ?

ಇಲ್ಲ. ಏಕೆಂದರೆ, ಶೇ.90 ರಷ್ಟು ಜನರಿಗೆ ಈ ಸೋಂಕಾಗಿರುವುದೇ ತಿಳಿದಿರುವುದಿಲ್ಲ. ಅವರಿಗೆ ತಂತಾನೆ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ಮೇಲೆ ಹೇಳಿದ ಎಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. 

3. ಕೊರೊನಾ ಸೋಂಕಿದೆ ಎಂದು ಅನುಮಾನ ಬಂದರೆ ಏನು ಮಾಡಬೇಕು? 

ಕೊರೊನಾ ರೋಗದ ಯಾವುದೇ ಲಕ್ಷಣಗಳಿಲ್ಲದಿದ್ದರೆ, ಯಾವುದೇ ಕ್ರಮದ ಅವಶ್ಯಕತೆ ಇಲ್ಲ. ಇದು ಕೇವಲ ನಿಮ್ಮ ಆತಂಕ ಇದ್ದರೂ ಇರಬಹುದು. ಕೊರೊನಾ ರೋಗದ ಲಕ್ಷಣಗಳಿದ್ದರೆ, ಹತ್ತಿರದ ವೈದ್ಯರ ಬಳಿ ಸಂದರ್ಶನ ಮಾಡಿ, ಸಲಹೆ ಪಡೆಯಿರಿ. ಎಲ್ಲಾ ನೆಗಡಿ, ಕೆಮ್ಮು, ಕೊರೊನಾ ಆಗಿರಬೇಕೆಂದಿಲ್ಲ.  ಆಕಸ್ಮಾತ್, ಕೊರೊನಾ ಸೋಂಕಿದ್ದರೂ ಹೆದರಬೇಕಾದ ಅವಶ್ಯಕತೆ ಇಲ್ಲ.  ಕೇವಲ ಶೇ.3 ಸೋಂಕಿತರು ಮಾತ್ರ ಸಾವಿಗೀಡಾಗುವ ಸಂಭವವಿದೆ. ಶೇ. 97 ಜನರು ವಾಸಿಯಾಗುತ್ತಾರೆ. ಶೇ. 90 ರಷ್ಟು ಜನರಿಗೆ ರೋಗ ಬಂದಿರುವುದೇ ತಿಳಿದಿರುವುದಿಲ್ಲ. ಉತ್ತಮ ಆಹಾರ, ತರಕಾರಿ, ಹಣ್ಣು ಮತ್ತು ಮಾಂಸಹಾರ ಇತರೆ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದು ಒಂದು ಸಾಮಾನ್ಯ ಫ್ಲೂ ರೋಗದಂತೆ ಬಂದು ಹೊರಟು ಹೋಗಿರುತ್ತದೆ. 

4. ಕೊರೊನಾ ಸೋಂಕಿರುವುದನ್ನು ಹೇಗೆ ದೃಢ ಪಡಿಸಿಕೊಳ್ಳಲಾಗುವುದು?

ಕೊರೊನಾ ಸೋಂಕಿದೆ ಎಂದು ಶಂಕೆ ಬಂದರೆ, ಹತ್ತಿರದ ಕೊರೊನಾ ಚಿಕಿತ್ಸೆಗೆಂದೇ ಇರುವ ನೋಂದಾಯಿತ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ನಿಮ್ಮ ಮೂಗಿನಿಂದ ದ್ರವರೂಪದ ಮಾದರಿಯನ್ನು ತೆಗೆದುಕೊಂಡು ನೊಂದಾಯಿತ ಸಂಶೋಧನಾ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿ ಕಾರ್ಡ್ ಟೆಸ್ಟ್ ಮತ್ತು ಪಿ.ಸಿ.ಆರ್. ಟೆಸ್ಟ್ ಹೀಗೆ ವಿವಿಧ ಪರೀಕ್ಷೆ ಮಾಡಿ ಕೊರೊನಾ ಸೋಂಕಿರುವುದನ್ನು ಪತ್ತೆ ಹಚ್ಚುತ್ತಾರೆ. ಎದೆ ಕ್ಷ-ಕಿರಣ ಪರೀಕ್ಷೆ ಮತ್ತು ಸಿ.ಟಿ. ಪರೀಕ್ಷೆಯಿಂದಲೂ ಕೆಲವು ಲಕ್ಷಣಗಳನ್ನು ಕಂಡು ಹಿಡಿಯಬಹುದು. 

 5. ಕೊರೊನಾ ಟೆಸ್ಟ್ ಪಾಸಿಟಿವ್ ಬಂದರೆ ಏನು ಮಾಡಬೇಕು?

ಹೆದರಬಾರದು. ಪ್ರಶ್ನೆ 1 ರಲ್ಲಿ ಹೇಳಿದಂತೆ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು. ಮನೆಯಲ್ಲಿ ಸ್ವಯಂ ಕರ್ಫ್ಯೂ ಹಾಕಿಕೊಂಡು ಮನೆ ಮಂದಿಗೆ ಕೊರೊನಾ ಬರದಂತೆ ನೋಡಿಕೊಳ್ಳುವುದು. ಉಸಿರಾಟದ ತೊಂದರೆ, ಜ್ವರ, ನೆಗಡಿ, ಗಂಟಲು ನೋವು ಹೀಗೆ ರೋಗ ಲಕ್ಷಣಗಳು ಹೆಚ್ಚಾಗುತ್ತಾ ಹೋದರೆ, ವೈದ್ಯರನ್ನು ಕಾಣಬೇಕು. ಅವರು ಹೇಳಿದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು. ಮನೆಯ ಮಂದಿ ಮತ್ತು ಸ್ನೇಹಿತರು ಎಚ್ಚರಿಕೆ ವಹಿಸಬೇಕು. ಅವರಿಗೂ ಸೋಂಕು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅವರೂ ಪ್ರಶ್ನೆ 1 ರಲ್ಲಿ ಹೇಳಿದಂತೆ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. 

6. ಮನೆಯಲ್ಲಿ ವಯಸ್ಸಾದವರು, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಕಿಡ್ನಿ ರೋಗ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿದ್ದರೆ, ಯಾವ ಎಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಬೇಕು? 

ಇಂತಹ ಜನರು ನಿಮ್ಮ ಮನೆಯಲ್ಲಿದ್ದರೆ, ಪ್ರಶ್ನೆ 1 ರಲ್ಲಿ ಹೇಳಿದಂತೆ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಧೂಮಪಾನ, ಆಲ್ಕೋಹಾಲ್ ಸೇವನೆ ಮಾಡಬಾರದು. ರೋಗ ನಿರೋಧಕ ಶಕ್ತಿಯನ್ನು ವೃದ್ದಿಮಾಡಿಕೊಳ್ಳಲು, ವ್ಯಾಯಾಮ ಮತ್ತು ಇತರೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. 

7. ಗರ್ಭಿಣಿಯರು ಮತ್ತು ಮಕ್ಕಳು ಯಾವ ಎಚ್ಚರಿಕೆ ವಹಿಸಬೇಕು?

ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆ ಕಡೆ ಹೋಗಬೇಕು. ಪ್ರಶ್ನೆ 1ರ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸೋಂಕುಂಟಾಗುವ ಸಂದರ್ಭಗಳಿಂದ ದೂರ ಉಳಿಯಬೇಕು.

8. ನಮ್ಮ ದೇಹದ ಯಾವ ಅಂಗದ ಮೂಲಕ ಕೊರೊನಾ ವೈರಸ್ ತೊಂದರೆ ಕೊಡುತ್ತದೆ?

ಕೊರೊನಾ ವೈರಸ್ ಉಸಿರಾಟದ ಅಂಗಗಳಿಂದ ನಮ್ಮ ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಕೊರೊನಾ ಸೋಂಕುಂಟಾದರೆ,  ದೇಹದ ಶ್ವಾಸಕೋಶ ಮತ್ತು ಇತರ ಅಂಗಗಳಲ್ಲಿ ವೃದ್ದಿ ಹೊಂದಿ, ಈ ಅಂಗಗಳಲ್ಲಿ ಉರಿಯೂತ ಉಂಟುಮಾಡುತ್ತದೆ. ನಂತರ ಶ್ವಾಸಕೋಶಗಳನ್ನು ನಿಷ್ಕ್ರಿಯಗೊಳಿಸಿ, ಕಾರ್ಯಕ್ಷಮತೆ ಕಡಿಮೆ ಮಾಡಿ, ಅವುಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ನಂತರ ಸಾವು ಸಂಭವಿಸಬಹುದು.

9. ರೋಗಿಗಳು ಸಾಮಾನ್ಯ ರೋಗ ಚಿಕಿತ್ಸೆಗೆ  ಆಸ್ಪತ್ರೆಗೆ ಹೋಗಬಹುದೇ?

ಸಾಧ್ಯವಾದಷ್ಟು ಮಟ್ಟಿಗೆ, ಆಸ್ಪತ್ರೆಯಿಂದ ದೂರ ಉಳಿಯುವುದು ಉತ್ತಮ. ಸಣ್ಣ ಪುಟ್ಟ ತೊಂದರೆಗೆ ವೈದ್ಯರ ಸಲಹೆಯನ್ನು ದೂರವಾಣಿಯ ಮೂಲಕ ಅಥವಾ ಟೆಲಿ ಸಂಭಾಷಣೆಯ ಮೂಲಕ ಪಡೆದರೆ ಉತ್ತಮ. ಹೀಗೆ ಮಾಡುವುದರಿಂದ, ಇತರ ರೋಗಿಗಳಿಂದ ಸೋಂಕು ಪಡೆಯುವುದನ್ನು ತಡೆಯಬಹುದು. 

10. ಬಹಳ ದಿನಗಳಿಂದ ತಡೆಹಿಡಿದಿರುವ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದೇ?

ಶಸ್ತ್ರಚಿಕಿತ್ಸಕರೊಂದಿಗೆ ಸಮಾಲೋಚಿಸಿ, ಅವರ ಆದೇಶದ ಮೇರೆಗೆ, ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿರಿ.  ತುರ್ತುಚಿಕಿತ್ಸೆ ಅವಶ್ಯಕತೆ ಇದ್ದ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡಲೇಬೇಕಾಗುತ್ತದೆ. ಇಂತಹ ವಿಷಯಗಳಲ್ಲಿ ವೈದ್ಯರ ನಿರ್ಣಯ ಬಹಳ ಮುಖ್ಯವಾಗುತ್ತದೆ. 

11. ಶಸ್ತ್ರಚಿಕಿತ್ಸೆಗೂ ಮುನ್ನ ಕೊರೊನಾ ಟೆಸ್ಟ್ ಮಾಡುವ ಅಗತ್ಯವಿದೆಯೇ?

ಹೌದು. ಶಸ್ತ್ರಚಿಕಿತ್ಸೆ ನಡೆಯುವ ಜಾಗದಲ್ಲಿ ನುರಿತ ವೈದ್ಯರು, ಅರವಳಿಕೆ ವೈದ್ಯರು, ನರ್ಸ್‌ಗಳು ಮತ್ತು ರೋಗಿಯು ಎಲ್ಲರೂ ಬಹಳ ಸಮಯ ಒಂದೇ ಕೊಠಡಿಯಲ್ಲಿ ಅತೀ ಸಮೀಪ ಇರಬೇಕಾದಂತಹ ಸಂದರ್ಭವಿರುತ್ತದೆ. ಹಾಗಾಗಿ ರೋಗಿಗೆ ಕೊರೊನಾ ಸೋಂಕಿದ್ದರೆ, ಎಲ್ಲರಿಗೂ ಹರಡುವ ಸಾಧ್ಯತೆ ಹೆಚ್ಚು. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದರಿಂದ, ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. 

12. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊರೊನಾದಿಂದಾದ ಶೇಕಡಾವಾರು ಸಾವುಗಳು ಕಡಿಮೆ. ಇದಕ್ಕೂ, ಬಿಸಿಜಿ ಲಸಿಕೆಗೂ ಸಂಬಂಧವಿದೆಯೇ?

ಬಿಸಿಜಿ ಲಸಿಕೆಯನ್ನು ಕಡ್ಡಾಯವಾಗಿ ಹಾಕುವ ನಿಯಮ ಹೊಂದಿರುವ ರಾಷ್ಟ್ರಗಳಾದ ರಷ್ಯಾ, ಭಾರತ, ಪೋರ್ಚುಗಲ್‌ಗ ಳಂತಹ ದೇಶಗಳಲ್ಲಿ ಕಡಿಮೆ ಪ್ರಮಾಣದ ಸಾವು ಉಂಟಾಗಿದೆ. ಅಂದರೆ, ಶೇ. 3% ರಷ್ಟು ಮಾತ್ರ ಜನರು ಸಾವನ್ನು ಅಪ್ಪಿದ್ದಾರೆ. ಸ್ಪೈನ್, ಇಟಲಿ, ಯುಕೆ ರಾಷ್ಟ್ರಗಳಲ್ಲಿ, ಕಡ್ಡಾಯವಾಗಿ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಪಾಲಿಸುತ್ತಿಲ್ಲ. ಅಲ್ಲಿ ಕೊರೊನಾದಿಂದದ ಶೇ. 10% ರಷ್ಟು ಜನರು ಸಾವನ್ನು ಅಪ್ಪಿದ್ದಾರೆ. ಈ ಕಾರಣದಿಂದ ಈ ನಿರ್ಣಯಕ್ಕೆ ಬಂದಿರಬಹುದು. 

13. ಕೊರೊನಾ ವೈರಸ್ ದೇಹದ ಹೊರಗೆ ಎಷ್ಟು ದಿನಗಳವರೆಗೆ ಜೀವಂತವಾಗಿರುತ್ತದೆ?

ಸೋಂಕಿನಿಂದ ಮಲಿನವಾದ ವಸ್ತುಗಳಲ್ಲಿ, 3-5 ದಿನಗಳವರೆಗೆ ವೈರಸ್ ಬದುಕಿರುವ ಸಾಧ್ಯತೆ ಇದೆ. ಆಗಾಗ ಮುಟ್ಟಿದ ಹಾಗೂ ಮಲಿನವಾದ ಜಾಗವನ್ನು, ಮತ್ತು ವಸ್ತುಗಳನ್ನು ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ದ್ರವಣವನ್ನು ಸಿಂಪಡಿಸಿ ಸ್ವಚ್ಚಗೊಳಿಸುವುದರಿಂದ ಇತರರಿಗೆ ವೈರಸ್ ಹರಡುವುದನ್ನು ತಡೆಯಬಹುದು. 

14. ವೈರಸ್ ನಿಷ್ಕ್ರಿಯಗೊಳಿಸಲು ಏನು ಮಾಡಬೇಕು?

ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ದ್ರಾವಣವನ್ನು ಸಿಂಪಡಿಸಿ ಸ್ವಚ್ಚಗೊಳಿಸುವುದರಿಂದ, ಡಿಟರ್ಜೆಂಟ್ ಬಳಸುವುದ ರಿಂದ, ಅಲ್ಟ್ರಾವೈಲೆಟ್ ಕಿರಣ ಬಳಸುವುದರಿಂದ,  ಮತ್ತು ಸ್ವಚ್ಚಗೊಳಿಸಿದ ವಸ್ತುಗಳನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ವೈರಸ್ ಗಳನ್ನು ಶೀಘ್ರವಾಗಿ ನಿರ್ಮೂಲನೆ ಮಾಡಬಹುದು. 

15. ಪ್ರಯಾಣಿಕರು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಸಾಧ್ಯವಾದಷ್ಟು ಓಡಾಟ ಕಡಿಮೆ ಮಾಡಬೇಕು. ಅನಿವಾರ್ಯವಾದಾಗ ಮಾತ್ರ ಪ್ರಯಾಣ ಮಾಡಬೇಕು. ದೂರದ ಪ್ರಯಾಣ, ದೇಶ ಅಥವಾ ವಿದೇಶ ಪ್ರವಾಸ ಅಥವಾ ಕಂಟೈನ್ಮೆಂಟ್ ಜಾಗಗಳಿಗೆ ಭೇಟಿ ಮಾಡಿದ್ದರೆ, ಅಂತಹ ಸಂದರ್ಭದಲ್ಲಿ  ಸ್ವಯಂ ಕರ್ಫ್ಯೂ ವಿಧಿಸಿಕೊಂಡು, 14 ದಿನಗಳವರೆಗೆ ಮನೆಯಲ್ಲಿರುವುದು ಒಳಿತು. ಯಾವುದೇ ಕೊರೊನಾ ರೋಗ ಲಕ್ಷಣಗಳು ಕಂಡುಬಂದರೆ, ಟೆಸ್ಟ್ ಮಾಡಿಸಿಕೊಳ್ಳಬೇಕು. ಟೆಸ್ಟ್‌ನ ಫಲಿತಾಂಶದ ಆಧಾರದ ಮೇಲೆ, ವೈದ್ಯರ ಸಹಾಯ ಪಡೆದು, ಸಲಹೆ ಪಾಲಿಸುವುದು ಉತ್ತಮ. 

16. ವಾಟ್ಸ್ ಆಪ್‌ನಲ್ಲಿ ಬರುವ ಸುದ್ದಿಗಳನ್ನು ಆಧಾರವಾಗಿಟ್ಟುಕೊಂಡು ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಹುದೇ?

ಇಂತಹ ಮೂರ್ಖತನ ಮಾಡಬಾರದು. ಬಾಬಾಗಳು, ಮಂತ್ರವಾದಿಗಳು ಹೇಳಿದ ಪುರಾವೆಗಳಿಲ್ಲದ ಚಿಕಿತ್ಸೆಗಳು, ನಿಮಗೆ ತೊಂದರೆ ಹೆಚ್ಚು ಮಾಡಬಹುದು. ಯಾವುದೇ ಕಾರಣಕ್ಕೂ, ಸಮೂಹ ಸನ್ನಿಗೆ ಒಳಗಾಗಬಾರದು. ಜನರು ಮೂಢನಂಬಿಕೆಗಳನ್ನು ಬಿಟ್ಟು, ವೈಜ್ಞಾನಿಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. 

17. ಕೊರೊನಾ ಚಿಕಿತ್ಸೆಗಾಗಿ ಔಷಧಿಗಳ ಸಂಶೋಧನೆ ನಡೆಯುತ್ತಿದೆಯೇ? 

ಹೌದು… ಹದಿನೈದು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಮುಡಿಪಾಗಿಟ್ಟು, ಔಷಧಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. ಒಂದು ಔಷಧ ಮಾರುಕಟ್ಟೆಗೆ ಬರಬೇಕಾದರೆ ಕನಿಷ್ಟ 5 ವರ್ಷವಾದರೂ ಬೇಕು. ತುರ್ತಾಗಿ ತಯಾರಿಸಲೂ ಸಹ ಕನಿಷ್ಟ 15 ರಿಂದ 20 ತಿಂಗಳ ಸಮಯ ಬೇಕಾಗಬಹುದು. ಹಾಗಾಗಿ, ಬೇರೆ ರೋಗಕ್ಕೆ ಕಂಡುಹಿಡಿದ ಔಷಧಿಗಳನ್ನು ಸೈದ್ಧಾಂತಿಕ ಆಧಾರದ ಮೇಲೆ ಕೊರೊನಾಗೆ ಬಳಸಲು ಸಂಶೋಧನೆ ಮಾಡುತ್ತಿದ್ದಾರೆ. ಇದು ವಾಮ ಮಾರ್ಗವಾದರೂ, ಸದ್ಯಕ್ಕೆ ಪ್ರಾಣ ಉಳಿಸುವಲ್ಲಿ ಸಹಾಯಕಾರಿಯಾಗಬಹುದು.  

18. ಯಾವ ಯಾವ ಪ್ರಕಾರವಾದ ಔಷಧಿಗಳು ಸಂಶೋಧನೆಗೆ ಒಳಗಾಗುತ್ತಿವೆ?

ಕೊರೊನಾ ಚಿಕಿತ್ಸೆಗಾಗಿ 536 ಪ್ರಾಜೆಕ್ಟ್‌ಗಳು ಪ್ರಾರಂಭವಾಗಿವೆ. ಲಸಿಕೆ ಮತ್ತು ಚಿಕಿತ್ಸೆ ಹೀಗೆ ಎರಡು ಪ್ರಕಾರದ ಔಷಧಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. 5 ಲಸಿಕೆಗಳು ಎರಡನೇ ಹಂತದ ಪರೀಕ್ಷೆ ಮುಗಿಸಿ ಮೂರನೇ ಹಂತಕ್ಕೆ ಕಾಲಿಟ್ಟಿವೆ. ಯಶಸ್ವಿಯಾದರೆ, ಲಸಿಕೆ ಇನ್ನು 3-6 ತಿಂಗಳಲ್ಲಿ ಸಿಗಬಹುದು.

19. ಕೊರೋನಗೆ ಯಾವ ಯಾವ ಔಷಧಗಳನ್ನು ಬಳಸುತ್ತಿದ್ದಾರೆ?

ನಿಖರವಾದ ಔಷಧ ಇನ್ನು ಸಂಶೋಧನೆಯಾಗುತ್ತಿದೆ. ಆದರೆ ವೈದ್ಯರು ರೋಗಲಕ್ಷಣದ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಗ್ರಂಥಗಳು ಮತ್ತು ಪ್ರಭಂಧಗಳ ಆಧಾರದ ಮೇಲೆಯೂ, ಕೊರೋನ ರೋಗಕ್ಕೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಔಷಧಗಳಾದ ಎಚ್ ಸಿ ಕ್ಯು, ಮಾಂಟೆಲ್ಯೂಕ್ಯಾಸ್ಟ್, ಇವರ್ಮೆಕ್ಟಿನ್, ಡಾಕ್ಸಿಸೈಕ್ಲಿನ್, ಲೊಪಿನವಿರ್ + ರಿಟೊನವಿರ್, ಕೊನ್ವಲಸಂಟ್ ಪ್ಲಾಸ್ಮ, ಇಟೋಲಿಜುಮಾಬ್, ರಾಮ್ದೆಸಿವಿರ್, ಫ್ಯಾವಿಪಿರವಿರ್, ಎಸಿಇ ಎನ್‌ಜೈಮ್ ತಡೆಯುವ ಔಷಧಗಳು, ಹೀಗೆ ಹಲವು ಔಷಧಗಳನ್ನು ಬಳಸುವ ಪ್ರಯೋಗ ನಡೆಯುತ್ತಿದೆ. ಇವೆಲ್ಲವನ್ನು ಇನ್ನು ಹೆಚ್ಚು ಸಂಶೋಧನೆಗೆ ಗುರಿಪಡಿಸುವ ಅಗತ್ಯವಿದೆ. ದಿನದಿಂದ ದಿನಕ್ಕೆ ಕೊರೋನಾ ಚಿಕಿತ್ಸೆಯ ಅನುಭವ ಹೆಚ್ಚುತ್ತಿದ್ದು, ವೈದ್ಯರ ನಿಪುಣತೆ ಹೆಚ್ಚುತ್ತಿದೆ. ಈ ಕಾರಣದಿಂದ ಹೆಚ್ಚಿನ ರೋಗಿಗಳು ಗುಣಮುಖರಾಗುತ್ತಿರುವುದನ್ನು ಕಾಣುತ್ತಿದ್ದೆವೆ. ಇದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

– ಡಾ. ಶಿವಮೂರ್ತಿ ಎನ್.
shivuindia@gmail.com