ಹೊನ್ನಾಳಿ ತಾಲ್ಲೂಕು ಪೂರ್ಣ ಸ್ತಬ್ಧ

ಹೊನ್ನಾಳಿ ತಾಲ್ಲೂಕು ಪೂರ್ಣ ಸ್ತಬ್ಧ

ಹೊನ್ನಾಳಿ, ಜು.12- ತಾಲ್ಲೂಕಿನಲ್ಲಿ ಜನತಾ ಕರ್ಫ್ಯೂಗೆ ಸಾರ್ವಜನಿಕರು, ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಮಹಾಮಾರಿಯಿಂದ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾ ಪೀಡಿತರ ಮನೆಗಳಿಗೆ ಸೀಲ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಕೆಲವು ಸಾರ್ವಜನಿಕರು ಹೊರಗೆ ಓಡಾಡದೇ ಭಯಭೀತರಾಗಿ ಮನೆಯಲ್ಲಿಯೇ ಇದ್ದಾರೆ.

ನಿನ್ನೆ ಪಟ್ಟಣ ಪಂಚಾಯ್ತಿ ವಾಹನದಲ್ಲಿ ಭಾನುವಾರ ಸಂಪೂರ್ಣ ಬಂದ್ ಇರುತ್ತದೆ ಎಂಬ ಕರೆಗೆ ಎಲ್ಲಾ ವರ್ತಕರು, ತರಕಾರಿ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಔಷಧಿ ಹಾಗೂ ಹಾಲಿನ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದವು. ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಹಿರೇಮಠದ ದ್ವಾರಬಾಗಿಲು ವೃತ್ತ, ನ್ಯಾಮತಿ ರಸ್ತೆ, ತುಮ್ಮಿನಕಟ್ಟೆ ರಸ್ತೆ, ಟಿಬಿ ವೃತ್ತ ಸೇರಿದಂತೆ ವಿವಿಧ ವೃತ್ತಗಳು ಯಾವುದೇ ವಾಹನವಿಲ್ಲದೇ ಬಿಕೋ ಎನ್ನುತ್ತಿದ್ದವು.

ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದ ಪೌರ ಕಾರ್ಮಿಕರು, ಪೊಲೀಸರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬರುವ ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಟ್ಯಾಕ್ಸಿ ವಾಹನದವರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿ ಹೇಳಿದರು.