ಸರ್ಕಾರದ ಆದೇಶ ಪಾಲಿಸಿದ ಹರಿಹರ

ಸರ್ಕಾರದ ಆದೇಶ ಪಾಲಿಸಿದ ಹರಿಹರ

ಹರಿಹರ, ಜು.12- ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊರೊನಾ ಹರಡುವುದನ್ನು ನಿಯಂತ್ರಿಸಲು ಘೋಷಣೆ ಮಾಡಿರುವ ಭಾನುವಾರದ ಲಾಕ್‌ಡೌನ್‌ಗೆ ನಗರದ ಎಲ್ಲಾ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸುವ ಮೂಲಕ ಕೊರೊನಾ ರೋಗವನ್ನು ಮುಕ್ತ ಮಾಡುವುದಕ್ಕೆ ಬೆಂಬಲ ನೀಡಿದರು. 

ನಗರದ ಜನನಿಬಿಡ ಪ್ರದೇಶವಾದ ತರಕಾರಿ ಮಾರುಕಟ್ಟೆ, ಮುಖ್ಯ ರಸ್ತೆ, ಗಾಂಧಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಹೈಸ್ಕೂಲ್ ಬಡಾವಣೆ, ಹರಪನಹಳ್ಳಿ ರಸ್ತೆ, ಹಳೇ ಪಿ.ಬಿ.ರಸ್ತೆ, ಶೋಭಾ ಟಾಕೀಸ್ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆಯಿಂದ ರಾತ್ರಿವರೆಗೆ ಬಂದ್ ಮಾಡಲಾಗಿತ್ತು.

ಆಟೋ, ಟ್ಯಾಕ್ಸಿ, ಬಸ್ ಸಂಚಾರ ಗೂಡ್ಸ್ ವಾಹನ ಸೇವೆ ಸ್ಥಗಿತಗೊಂಡಿತು. ದಿನಸಿ ಪದಾರ್ಥಗಳು, ತರಕಾರಿ, ಹೋಟೆಲ್, ಬೇಕರಿ, ಗ್ಯಾರೇಜ್, ಪಾತ್ರೆ, ಬಟ್ಟೆ, ಬಂಗಾರ, ಕೈಗಾರಿಕೆ, ಟೈರ್, ಟ್ಯೂಬ್, ವರ್ಕ್ಸ್ ಶಾಪ್, ಗೊಬ್ಬರ, ಪೈಪ್, ಚಪ್ಪಲಿ, ಮೊಬೈಲ್ ಸೇರಿದಂತೆ ಹಲವಾರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಸರ್ಕಾರದ ಆದೇಶವನ್ನು ಪಾಲನೆ ಮಾಡಿದವು. ಅಲ್ಲೊಂದು ಇಲ್ಲೊಂದು ಔಷಧಿ ಅಂಗಡಿ ಮತ್ತು ಖಾಸಗಿ ಆಸ್ಪತ್ರೆ ಬಿಟ್ಟರೆ ಉಳಿದ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ, ಪೌರಾಯುಕ್ತರಾದ ಎಸ್.ಲಕ್ಷ್ಮಿ, ಸಿಪಿಐ ಎಸ್.ಶಿವಪ್ರಸಾದ್, ಪಿಎಸ್ಐ ಎಸ್.ಶೈಲಜಾ ಹಾಜರಿದ್ದರು.