ಮುರುಘಾ ಮಠದಲ್ಲಿ ಬಸವ ಯೋಗ ದಿನಾಚರಣೆ

ಮುರುಘಾ ಮಠದಲ್ಲಿ ಬಸವ ಯೋಗ ದಿನಾಚರಣೆ

ಚಿತ್ರದುರ್ಗ,  ಜೂ. 21 – ಜೂನ್ 21 ಅನ್ನು ವಿಶ್ವ ಯೋಗ ದಿನ ಎಂದು ಕೇಂದ್ರ ಸರ್ಕಾರ ಪರಿಗಣಿಸಿದ್ದು, ಹೊರ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತಿದೆ. ವಿಶ್ವ ಯೋಗದಿಂದ ನಾವು ಏಕೆ ದೂರ ಇರಬೇಕೆಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಬಸವ ಯೋಗ ಧ್ಯಾನ ದಿನ ಮಾಡಬೇಕೆಂದು ನಿರ್ಧರಿಸಿ, ನಾವುಗಳು ಬಸವ ಯೋಗ ಧ್ಯಾನ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ವಿಶ್ವ ಯೋಗ ದಿನದ ಅಂಗವಾಗಿ ಶ್ರೀ ಮುರುಘಾ ಮಠದಲ್ಲಿ ಇಂದು ನಡೆದ ಬಸವ ಯೋಗ ದಿನ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು.

ಕೋವಿಡ್-19 ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ. ಎಲ್ಲರೂ ಬಂಧಿಗಳಾಗಿದ್ದರು. ಇಡೀ ದೇಶ ಮನೆಯಲ್ಲಿರುವ ಸ್ಥಿತಿ ನಿರ್ಮಾಣವಾಗಿತ್ತು. ಮನೆ ಅತ್ಯಂತ ಸುರಕ್ಷಿತವಾದುದು. ಕಾರಣ ಪ್ರಾಣವನ್ನು ಖರೀದಿ ಮಾಡಲು ಬರುವುದಿಲ್ಲ. ನಮ್ಮದು ಕೊನೆಯ ಜನ್ಮ. ಮತ್ತೊಮ್ಮೆ ಜನ್ಮ ಇರುವುದಿಲ್ಲ. ಕಾಲಧರ್ಮ ಎನ್ನುವುದು ಇದೆ. ಕಾಲಧರ್ಮ ನಮಗೆ ದುರಂಹಕಾರಿಯಾಗದಿರು ಎಂದು ಹೇಳುತ್ತದೆ. ಸ್ವಾಮೀಜಿಗಳಾದ ನಾವು ಸಮಾಜಕ್ಕಾಗಿ ಇದ್ದೇವೆ ಎನ್ನುವುದಾದರೆ ನಿರಹಂಕಾರ; ಸಮಾಜ ನಮಗಾಗಿ ಇದೆ ಎಂದರೆ ಅದು ದುರಂಹಕಾರವಾಗುತ್ತದೆ ಎಂದರು.

ಅಹಂಕಾರದಿಂದ ನಮ್ಮನ್ನು ಬಿಡಿಸಿಕೊಳ್ಳಬೇಕು. ಜನಸೇವೆ ನಮ್ಮ ಬದುಕಾಗಬೇಕು. ಕಾಲಧರ್ಮ ಒಂದಲ್ಲಾ ಒಂದು ದಿನ ಬಾಗಲಾರದವರನ್ನು ಬಗ್ಗಿಸುತ್ತದೆ. ಸಮತೋಲನ, ವಿನಯದ ಜೊತೆ ಸಾಗಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಒಂದಷ್ಟು ಜೀವನ ಪದ್ಧತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು.  ಭಾರತ ಸುರಕ್ಷಿತವಾಗಿರುವ ದೇಶ. ಅನೇಕ ವರ್ಷಗಳಿಂದ ದುಡಿಯಲು ಬೇರೆ ರಾಷ್ಟ್ರಗಳಿಗೆ ಹೋದವರು ಭಾರತ ಸುರಕ್ಷಿತ ಎಂದು ವಾಪಾಸ್ ಬರುತ್ತಿದ್ದಾರೆ. ಹಣ ಮುಖ್ಯವಲ್ಲ ಜೀವ ಮುಖ್ಯ ಎಂಬುದು ಅನಿವಾಸಿ ಭಾರತೀಯರಿಗೆ ಅನಿಸಿದೆ. ಭಾರತ ಪ್ರಪಂಚದಲ್ಲಿ ಅತ್ಯಂತ ಸುರಕ್ಷಿತವಾದ ದೇಶ. ನಮ್ಮ ಭ್ರಾತೃತ್ವವನ್ನು ನಾವು ತೋರಿಸೋಣ. ಭಾರತದಲ್ಲಿ ಕೊರೊನಾ ಪೀಡಿತರು ಶೇ.54ರಷ್ಟು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಶ್ರೀ ಬಸವ ನಾಗಿದೇವ ಸ್ವಾಮೀಜಿ, ಶ್ರೀ ಕೇತೇಶ್ವರ ಸ್ವಾಮೀಜಿ, ಸಾಧಕರು, ಎಲ್ಲಾ ಧರ್ಮ ಸಮಾಜದ ಮುಖಂಡರು ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಮೊದಲಾದವರಿದ್ದರು. ಜಮುರಾ ಕಲಾವಿದರು ವಚನ ಗಾಯನ ಮಾಡಿದರು.