ಪ್ರಾಯೋಗಿಕ ಹಂತಗಳೊಂದಿಗೆ ಶಾಲೆಗಳು ಪ್ರಾರಂಭವಾಗಲಿ

ಪ್ರಾಯೋಗಿಕ ಹಂತಗಳೊಂದಿಗೆ ಶಾಲೆಗಳು ಪ್ರಾರಂಭವಾಗಲಿ

ತೇಜಸ್ವಿ ವಿ. ಪಟೇಲ್ ಅಭಿಪ್ರಾಯ

ಚನ್ನಗಿರಿ, ಜೂ.10- ಶಾಲೆಗಳನ್ನು ಅಧಿಕೃತ ಪಠ್ಯ ಅನ್ವಯ, ಕೊರೊನಾ ಸಂಪೂರ್ಣ ಹತೋಟಿಗೆ ಬಂದ ಮೇಲೆ ಪ್ರಾರಂಭಿಸಬೇಕು. ಆದರೆ ಬಹುದಿನಗಳ ಕಾಲ ಮಕ್ಕಳು ಶಾಲೆಯಿಂದ ದೂರ ಉಳಿದರೆ, ಪುನಃ ಅವರನ್ನು ಶಾಲಾ ವಾತಾವರಣಕ್ಕೆ ಹೊಂದಿಸುವುದು ಕಷ್ಟವಾಗುತ್ತದೆ. ಹಾಗಾಗಿ ಶಾಲೆಯ ವಾತಾವರಣ ಮುಂದುವರೆಯಬೇಕು ಮತ್ತು ಕೋವಿಡ್-19 ಸೂಚನೆಯ ಪಾಲನೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿ. ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಪ್ರಾರಂಭಿಸುವ ಕುರಿತು ಇಂದು ನಡೆದ ಶಾಲಾಭಿವೃದ್ಧಿ ಸಮಿತಿ ಮತ್ತು ಫೋಷಕರ ಅಭಿಪ್ರಾಯ ಸಂಗ್ರಹಣೆಯ ಸಭೆಯಲ್ಲಿ ಸರ್ವಾಭಿಪ್ರಾಯಗಳನ್ನು ಸಂಕ್ಷೇಪಿಸಿ ಅವರು ಮಾತನಾಡಿದರು.

ತರಗತಿಯ ತಾರತಮ್ಯವಿಲ್ಲದೆ ಗುಂಪುವಾರು ಮಕ್ಕಳ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ನೀಡಬೇಕು. ಆಯಾ ಗುಂಪಾಗಲೀ, ಶಿಕ್ಷಕರಾಗಲೀ, ಪರಸ್ಪರ ಭೇಟಿಯಾಗುವ ಅವಕಾಶವಿರಕೂಡದು. ಗುಂಪುಗಳನ್ನು ಸ್ಥಳೀಯ ಲಭ್ಯತೆಯ ಆಧಾರದ ಮೇಲೆ ವಿಂಗಡಿಸಿ ಆಯಾ ಪ್ರದೇಶದಲ್ಲಿ ಆ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ಆ ಗುಂಪಿನ ಜವಾಬ್ದಾರಿ ಹೊಂದಿದ ಶಿಕ್ಷಕರಿಗೆ ಸೇರಲ್ಪಡುತ್ತದೆ. 

ಶಿಕ್ಷಕರಿಗೆ ಪಠ್ಯದ ಹೊಣೆ ನೀಡದೇ ವೈಯಕ್ತಿಕ ಕೌಶಲ್ಯ ಮತ್ತು ಆಸಕ್ತಿಗಳ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಮುಕ್ತ ಅವಕಾಶ ನೀಡಬೇಕು. ಶಾಲೆ ಪ್ರಾರಂಭಿಸಿದ ಕೆಲವು ದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಆಂತಕ ಹೆಚ್ಚಾಗಿದ್ದು ಇದು ಬಹುಮುಖ್ಯವಾಗಿ ಚಿಂತಿಸಬೇಕಾದ ಸಂಕೀರ್ಣ ವಿಷಯವಾಗಿದೆ ಎಂದು ನುಡಿದರು.

ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ರಮೇಶ್‍ನಾಯ್ಕ್, ಕೊರೋನಾ ವೈರಸ್ ಮಕ್ಕಳಿಗೆ ಬೇಗ ಅಂಟಿಕೊಳ್ಳುವುದರಿಂದ ಅವರಲ್ಲಿ ದೈಹಿಕ ಅಂತರ ಕಾಪಾಡುವುದು ಕಷ್ಟ. ಆದ್ದರಿಂದ ಇನ್ನೊಂದೆರಡು ತಿಂಗಳುಗಳ ಕಾಲ ಶಾಲೆ ತೆರೆಯುವುದನ್ನು ಮುಂದೂಡುವುದು ಸೂಕ್ತ ಎಂದು ಸಲಹೆ ನೀಡಿದರು. 

ಗ್ರಾಮ ಪಂಚಾಯಿತಿ ಸದಸ್ಯ ಟಿ.ಬಿ.ಗಂಗಾಧರ್ ‘ಕೊರೋನಾ ಸಂಪೂರ್ಣ ಹತೋಟಿಗೆ ಬಂದ ನಂತರ ಶಾಲೆ ತೆರೆಯುವುದು ಸೂಕ್ತ’ ಎಂದು ಹೇಳಿದರೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತ, ‘ಶಾಲೆಯನ್ನು ಪ್ರಾರಂಭಿಸಿ ಎರಡು ಅಥವಾ ಮೂರು ಪಾಳಿಯಲ್ಲಿ ಶಾಲೆ ನಡೆಸುವುದು ಹೆಚ್ಚು ಸಮಂಜಸ’ ಎಂದೂ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಡಿ.ವಿ.ನೇತ್ರಾವತಿ ಕೂಡ ‘ಮಕ್ಕಳ ಅನಗತ್ಯ ಸುತ್ತಾಟ ತಪ್ಪಿಸಲು ಮತ್ತು ಶಾಲಾ ಸಂಪರ್ಕದ ನಿರಂತರತೆಯನ್ನು ಸಾಧಿಸಲು ಶಾಲೆ ಪ್ರಾರಂಭವಾಗುವುದು ಒಳಿತು’ ಎಂದು ನುಡಿದರು.

ಸಭೆಯ ಒಟ್ಟಾರೆ ಅಭಿಪ್ರಾಯವೇನೆಂದರೆ, ಒಂದರಿಂದ ನಾಲ್ಕನೇ ತರಗತಿಗಳನ್ನು ಹೊರತು ಪಡಿಸಿ, ಐದರಿಂದ ಏಳನೇ ತರಗತಿಗಳವರೆಗೆ ಸೂಕ್ತ ಚಿಂತನೆ ಮತ್ತು ಪ್ರಾಯೋಗಿಕ ಹಂತಗಳೊಂದಿಗೆ ಶಾಲೆ ಪ್ರಾರಂಭವಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. 

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಕೆ.ಎಸ್. ವಿಜಯಕುಮಾರ್, ಶಾಲಾಭಿವೃದ್ಧಿ
ಸಮಿತಿ ಸದಸ್ಯರುಗಳಾದ ಉಷಾಬಾಯಿ, ಸುಮ, ಉಮೇಶ್, ಹಾಲಮ್ಮ, ಅನ್ನಪೂರ್ಣಮ್ಮ, ರೇಷ್ಮಾ ಬಾನು ಹಾಗೂ ಗ್ರಾ.ಪಂ. ಸದಸ್ಯೆ ಗೀತಾ ಅರುಣ್‌ ಕುಮಾರ್, ಆರೋಗ್ಯ ಕಾರ್ಯಕರ್ತೆ ಸರಸಮ್ಮ ಉಪಸ್ಥಿತರಿದ್ದರು. 

ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಎಸ್. ಮುರುಗೇಶ್ ವಹಿಸಿಕೊಂಡಿದ್ದರು. ಶಾಲಾ ಶಿಕ್ಷಕರುಗಳಾದ ಕೆ.ಬಿ. ಇಸ್ಮಾಯಿಲ್, ದೈಹಿಕ ಶಿಕ್ಷಕ ಟಿ. ರಾಮಚಂದ್ರಪ್ಪ, ಜಿ.ಬಿ. ಶಿವಕುಮಾರ್, ಟಿ.ಗೌರಮ್ಮ, ಯು. ಜಯಮ್ಮ, ವಿ.ವಿ. ರೂಪ, ಟಿ.ಉಷಾ, ಟಿ.ಲಿಂಗಮ್ಮ, ರಾಹತ್, ನೇತ್ರಾವತಿ ಮತ್ತು  ಪ್ರಕಾಶ್ ಕೊಡಗನೂರು ಸಭೆಯಲ್ಲಿ ಉಪಸ್ಥಿತರಿದ್ದರು.