ಈರುಳ್ಳಿ ದರ ಹೆಚ್ಚಳಕ್ಕೆ ಕಾರ-ಮಂಡಕ್ಕಿ ನಗರವೂ ಸುಸ್ತು

ಈರುಳ್ಳಿ ದರ ಹೆಚ್ಚಳಕ್ಕೆ  ಕಾರ-ಮಂಡಕ್ಕಿ ನಗರವೂ ಸುಸ್ತು

ದರ ಏರಿಕೆ ಪರಿಣಾಮ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಈರುಳ್ಳಿ ತರಿಸಿರುವ ಕಣ್ಣೀರಿಗೆ ಖಾರ-ಮಂಡಕ್ಕಿ ನಗರದ ಜನತೆ ಯೇನೂ ಹೊರತಾಗಿಲ್ಲ.  ಅಂದಹಾಗೆ ಸದ್ಯಕ್ಕೆ ಕಣ್ಣೀರು ಬರಲು ಈರುಳ್ಳಿ ಹೆಚ್ಚಲೇ ಬೇಕೆಂದೇನಿಲ್ಲ, ಆ ಪದವನ್ನು ಉಚ್ಚರಿಸಿದರೂ ಸಾಕು.

ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಈರುಳ್ಳಿ ದರ ಏರಿಕೆಯ ಸುದ್ದಿಗಳನ್ನು ನೋಡುತ್ತಾ, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ದರ ಏರಿಕೆಯ ಬಗೆಗಿನ ಜೋಕ್ ಗಳು, ಫೋಟೋಗಳನ್ನು ನೋಡಿ ಮುಗುಳ್ನಗುತ್ತಲೇ ಈರುಳ್ಳಿ ಬಳಕೆಗೆ ಬ್ರೇಕ್ ಹಾಕಿಕೊಳ್ಳುತ್ತಿದ್ದಾರೆ.

ಸದ್ಯ ದಾವಣಗೆರೆಯ ಮಾಲ್ ಗಳಲ್ಲಿ ಈರುಳ್ಳಿ ದರ ಶತಕ ದಾಟಿದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 70 ರಿಂದ 80 ರೂ.ಗಳಂತೆ ಮಾರಾಟವಾಗುತ್ತಿದೆ. ಉಳಿದಂತೆ ಒಂದಿಷ್ಟು ಕಡಿಮೆ ಗುಣಮಟ್ಟದ್ದು. 50 ರಿಂದ 60 ರೂ.ಗಳಿಗೆ ದೊರೆಯುತ್ತಿದೆ. ದೇಶದಲ್ಲಿಯೇ ಹೆಚ್ಚಿನದಾಗಿ ಈರುಳ್ಳಿ ಬೆಳೆಯುವ ರಾಜ್ಯಗಳೆಂದರೆ ಮಹಾರಾಷ್ಟ್ರ ಹಾಗೂ ಕರ್ನಾಟಕ.  ಆದರೆ ಅತಿವೃಷ್ಟಿಯ ಪರಿಣಾಮ ಈ ಎರಡೂ ರಾಜ್ಯಗಳಲ್ಲೂ ಈರುಳ್ಳಿ ಬೆಳೆ ನೆಲಕ್ಕಚ್ಚಿದೆ.  ಆಂತರಿಕ ಮಾರುಕಟ್ಟೆಗೆ ಈರುಳ್ಳಿ ಕೊರತೆ ಯಾದ ಪರಿಣಾಮ ಇದೀಗ ಬೆಲೆ ಆಕಾಶಕ್ಕೆ ಜಿಗಿದಿದೆ.

ಹೊರದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ ಅಕ್ಟೋಬರ್‌ ಆರಂಭದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಿತ್ತು  ಇದರಿಂ ದಾಗಿ ಬೆಲೆ ಇಳಿಯಬಹುದೆಂದು ಭಾವಿಸಲಾಗಿತ್ತಾ ದರೂ, ಅದು ಸಾಧ್ಯವಾಗಿಲ್ಲ. ಸುಮಾರು 1.8 ಕೋಟಿ ಟನ್‌ ಈರುಳ್ಳಿ ಉತ್ಪಾದಿಸುವ ಹಾಗೂ 20 ಲಕ್ಷ ಟನ್‌ಗಳಷ್ಟು ರಫ್ತು ಮಾಡುವ ಭಾರತ, ರಫ್ತನ್ನು ಪೂರ್ತಿ ನಿಲ್ಲಿಸಿದ್ದರೂ ದರ ಇಳಿಮುಖವಾಗದ ಕಾರಣ ಸಾಮಾನ್ಯ ಜನ ಪರದಾಡುವಂತಾಗಿದೆ.

ಒಂದೆಡೆ ಪ್ರಾಕೃತಿಕ ಕಾರಣಗಳಿಂದಾಗಿ ಈರುಳ್ಳಿ ಬೆಲೆ ಏರಿಕೆಯಾಗಿದೆಯಾದರೂ, ಇತಹ ಹಿಂದೆ ಕೃತಕ ಅಭಾವ ಸೃಷ್ಟಿಸುವ ಮಧ್ಯವರ್ತಿಗಳ ಹಾವಳಿಯನ್ನೂ ತಳ್ಳಿ ಹಾಕುವಂತಿಲ್ಲ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿ ಬೆಳೆ ನಷ್ಟವಾದ ಪರಿಣಾಮ ಹಾಗೂ ಜಿಲ್ಲೆಯ ಸುತ್ತ ಮುತ್ತಲೂ ಸಹ ಮಳೆ ಯಿಂದಾಗಿ ಉತ್ತಮ ಬೆಳೆ ಇಲ್ಲದ ಕಾರಣ ಈರುಳ್ಳಿ ಮಾರುಕಟ್ಟೆಗೆ ಈರುಳ್ಳಿ ಬರುವುದು ಕಡಿಮೆಯಾಗಿದೆ ಎನ್ನು ತ್ತಾರೆ ಎಪಿಎಂಸಿ ಮಾರುಕಟ್ಟೆಯಲ್ಲಿನ ವ್ಯಾಪಾರಿಯೊಬ್ಬರು.

ಉತ್ತಮ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿಯೇ ಇದೆ. ಕಡಿಮೆ ಗಾತ್ರದ ಈರುಳ್ಳಿಯನ್ನು ತಮಿಳು ನಾಡಿನ ವ್ಯಾಪಾರಸ್ಥರು ಹೆಚ್ಚಾಗಿ ಖರೀದಿಸುತ್ತಾರೆ. ಆದ್ದರಿಂದ ಚಿಕ್ಕ ಈರುಳ್ಳಿಗೂ ಈಗ ಬೆಲೆ ಬಂದಿದೆ. ಈ ಬಾರಿ ಉತ್ತಮ ಮಳೆ ಬಿದ್ದ ಪರಿಣಾಮ ಅನೇಕರು ಈರುಳ್ಳಿ ಬೆಳೆದಿದ್ದಾರೆ. ಬಹುತೇಕ ಜನವರಿ ನಂತರ  ಫಸಲು ಮಾರಾಟಕ್ಕೆ ಸಿದ್ಧವಾಗುತ್ತದೆ. ಆಗ ಈರುಳ್ಳಿ ದರ ಕಡಿಮೆಯಾಗಬಹುದು ಎನ್ನುವ ಆಶಾ ಭಾವನೆಯನ್ನೂ ವ್ಯಾಪಾರಿ ವ್ಯಕ್ತಪಡಿಸಿದ್ದಾರೆ.

ಸದ್ಯ ದಾವಣಗೆರೆಯ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ಅರ್ಧ ಪ್ರಮಾಣಕ್ಕೆ ಕುಸಿದಿದೆ. ಮನೆಗೆ 5 ಕೆ.ಜಿ. ಕೊಳ್ಳುತ್ತಿದ್ದವರು 1 ಅಥವಾ 2 ಕೆ.ಜಿ. ಕೊಡಿ ಸಾಕು ಎನ್ನುತ್ತಿದ್ದಾರೆ. ಹೋಟೆಲ್ ಗಳಿಗೆ ಚೀಲಗಟ್ಟಲೆ ಖರೀದಿಸುತ್ತಿದ್ದವರು ಇದೀಗ ಕೆ.ಜೆ. ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ.

ಇತ್ತ ಹೋಟೆಲ್ ಗಳಲ್ಲೂ ಈರುಳ್ಳಿ ಬದಲಾಗಿ ಕೋಸು ಬಳಕೆ ಹೆಚ್ಚಾಗುತ್ತಿದೆ. ಆದರೆ ಅನಿವಾರ್ಯ ಪದಾರ್ಥಗಳಿಗೆ ಮಾತ್ರ ಈರುಳ್ಳಿಯನ್ನು ಅನಿವಾರ್ಯವಾಗಿಯೇ ಬಳಸುತ್ತಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಈರುಳ್ಳಿ ಜೋಕ್ಸ್

ಈರುಳ್ಳಿ ಚೀಲಕ್ಕೆ ಬೀಗ ಹಾಕಿಕೊಂಡು, ತಬ್ಬಿಕೊಂಡು ಮಲಗಿರುವ ಮನೆ ಮಾಲೀಕನ ಚಿತ್ರ.

ಅತ್ತೆ ಮನೆಯ ತಿಜೋರಿಯ ಕೀಲಿ ತೆಗೆದು ಅದರಲ್ಲಿಟ್ಟಿದ್ದ ಏಳೆಂಟು ಈರುಳ್ಳಿಯಲ್ಲಿ ಒಂದನ್ನು ಮಾತ್ರ ತೆಗೆದು ಸೊಸೆಗೆ ಕೊಡುವ ವೀಡಿಯೋಗಳು.

ದಾರಿಯಲ್ಲಿ ನೋಟಿನ ಕಂತೆ ಹಾಗೂ ಈರುಳ್ಳಿ ಎರಡೂ ಒಟ್ಟಿಗೆ ಬಿದ್ದಾಗ, ನೋಟನ್ನು ತೆಗೆದುಕೊಳ್ಳದೆ ಬರೀ ಈರುಳ್ಳಿಯನ್ನಷ್ಟೇ ಆಯ್ದುಕೊಂಡು ಓಡಿ ಹೋಗುವ ಮಹಿಳೆ.

`ಅಹಂಕಾರದಿಂದ ಹೇಳುತ್ತೇನೆ ಎಂದುಕೊಳ್ಳಬೇಡಿ’. ಇವತ್ತು ನಮ್ಮ ಮನೆಯಲ್ಲಿ ಈರುಳ್ಳಿ ದೋಸೆ ಎನ್ನುವ ಸಂದೇಶಗಳು.

ಐಫೋನ್ ಹಾಗೂ ಈರುಳ್ಳಿಯ ಎಕ್ಸ್ ಚೇಂಜ್ ಚಿತ್ರಗಳು. ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಈರುಳ್ಳಿ ದರ ಏರಿಕೆ ಬಗ್ಗೆ ಸಾಕಷ್ಟು ವೀಡಿಯೋ, ಚಿತ್ರ, ಜೋಕ್ ಗಳು ಹರಿದಾಡುತ್ತಲೇ ಇವೆ.

ಸಂಜೆಯಾಗುತ್ತಲೇ ಖಾರ-ಮಂಡಕ್ಕಿ, ಬಿಸಿ ಮೆಣಸಿನ್ಕಾಯಿ ಸವಿಯುವ ಜನತೆಗೆ ಮಂಡಕ್ಕಿ ಜೊತೆ ಈರುಳ್ಳಿ ಇರದಿದ್ದರೆ ಸವಿ ಪೂರ್ಣವಾಗದು. ಹೋಟೆಲ್ ನವನು ಚಿಕ್ಕದಾಗಿ ಹೆಚ್ಚಿದ್ದ ಈರುಳ್ಳಿಯನ್ನು ಮಂಡಕ್ಕಿ ಮೇಲೆ ಹಾಕಿದರೆ ಇನ್ನಷ್ಟು ಹಾಕು ಎಂದು ಹಾಕಿಸಿಕೊಳ್ಳುವುದು ಮಾಮೂಲು. ಆದರೆ, ದರ ಏರಿಕೆ ಪರಿಣಾಮ ಮತ್ತೊಮ್ಮೆ ಈರುಳ್ಳಿ ಕೇಳಿದರೆ ಅಂಗಡಿಯವನ ಮುಖ ಕೆಂಪಾಗುತ್ತದೆ. ಅಷ್ಟೇ ಅಲ್ಲ, ಈರುಳ್ಳಿ ಇಲ್ಲ ಎಂಬ ಉತ್ತರವೂ ಬರುತ್ತದೆ.  ಈರುಳ್ಳಿ ಪಕೋಡ, ಈರುಳ್ಳಿ ಭಜಿ ಕಣ್ಮರೆಯಾಗಿವೆ. ಈಗಾಗಲೇ ಬೆಂಗಳೂರಿನ ಹೋಟೆಲ್ ಗಳ ಮೆನು ಕಾರ್ಡ್ ನಲ್ಲಿ ಈರುಳ್ಳಿ ದೋಸೆ ಮರೆಯಾಗಿದೆ. ಇದು ದಾವಣಗೆರೆಯಲ್ಲೂ ಮುಂದುವರಿದರೆ ಆಶ್ಚರ್ಯವಿಲ್ಲ.

ಈರುಳ್ಳಿ ದರ ಏರಿಕೆಯ ಬಿಸಿ ಎದುರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಈಜಿಪ್ಟ್ ಹಾಗೂ ಟರ್ಕಿ ದೇಶಗಳಿಂದ ಈರುಳ್ಳಿ ರಫ್ತು ಮಾಡಿಕೊಳ್ಳಲು ನಿರ್ಧರಿಸಿದೆ. ಈಜಿಪ್ಟ್ ನಿಂದ 6090 ಟನ್ ಹಾಗೂ ಟರ್ಕಿಯಿಂದ 11 ಸಾವಿರ ಟನ್ ಅಮದು ಮಾಡಿಕೊಳ್ಳಲು ನಿರ್ಧರಿಸಿದ್ದು, ದಾಸ್ತಾನು ಡಿಸೆಂಬರ್ ಮಧ್ಯದಲ್ಲಿ ದೇಶಕ್ಕೆ ಬರಲಿದೆ. ಒಟ್ಟಿನಲ್ಲಿ ಈರುಳ್ಳಿ ದರ ಸದ್ಯಕ್ಕಂತೂ ಕಡಿಮೆಯಾಗುವ ನಿರೀಕ್ಷೆ ಇಲ್ಲ.