`ಹಲೋ …’
ಯಾರು, ಅಬಕಾರಿ ದೊರೆಗಳಾ ? ದೊರೇ, `ನಾನು, ನಿಮ್ಮ ಪಾನಪ್ರಿಯ ಸೇವಾ ಇಲಾಖೆ ಕೇಂದ್ರದ ಆಜೀವ ಸದಸ್ಯ ತೀರ್ಥೇಶ ‘ ನನಗೆ, ನನ್ನಂತಹ ಅನೇಕರಿಗೆ ಬಹಳ ತೊಂದರೆ ಆಗಿದೆ ಸ್ವಾಮಿ,
ದಯಮಾಡಿ ಸಮಸ್ಯೆ ಕೇಳುವ ಕೃಪೆ ಮಾಡಬೇಕು.
`ಹೇಗಿದ್ದೀಯಪ್ಪಾ ತೀರ್ಥೇಶ, ಬಹಳ ದಿನಗಳ ನಂತರ ಫೋನ್ ಮಾಡ್ತಾ ಇದ್ದೀಯಾ? ಏಕಪ್ಪಾ ವಾಯ್ಸ್ , ಕಟ್ಕಟ್ ಆಯ್ತಾಯಿದೆ ?
`ಕಟ್ಕಟ್ ಅಲ್ಲ ಸಾರ್, ಅದು ಶೇಕ್ ಆಗ್ತಾ ಇರೋದು’. ಅದನ್ನೇ ನಿಮಗೆ ಸುದೀರ್ಘವಾಗಿ ಪತ್ರ ಬರೆದು ತಿಳಿಸಬೇಕೆಂದು ಬಯಸಿದ್ದೆ ಆದರೆ, ಪೆನ್ನು ಹಿಡಿದಾಗ ಕೈ ನಡುಗುತ್ತದೆ, ಬರೆಯಲು ಆಗುತ್ತಿಲ್ಲ. ಏನು ಮಾಡೋದು? ಇದು ನನ್ನ ಸಮಸ್ಯೆ ಮಾತ್ರವಲ್ಲ ದೊರೆ !. ಮರೆಯಲಾಗದ ಇಂತಹ ಆಘಾತಕಾರಿ ಚಿಂತೆಯಲ್ಲಿಯೇ ಹಲವು ಗ್ಲಾಸ್ಮೇಟ್ಗಳು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಅಂತಹ ದುರ್ಘಟನೆಗಳ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೀವು ನಿತ್ಯವೂ ಓದುತ್ತಿರಬಹುದು, ದೂರದರ್ಶನದಲ್ಲಿ ದಿನವಿಡೀ ನೋಡಿರಲೂಬಹುದು. ಇನ್ನು ಕೆಲವರ ಸ್ಥಿತಿಯಂತೂ ಕರುಣಾಜನಕ. ಅವರ ಕಥೆ ಕೇಳಿದರೆ ಕರುಳು ಕಿತ್ತು ಬರುವಂತಿದೆ.
ಎಲ್ಲದಕ್ಕೂ `ಲಾಕ್ ಡೌನ್’ ರಜೆ, ಮಾಡಲು ಕೆಲಸವಿಲ್ಲ, ಹಗಲೆಲ್ಲ ಹಾಸಿಗೆಯಲ್ಲಿ ಉರುಳಾಡಿ ಸಂಜೆ ಯಥಾಪ್ರಕಾರ ಮಾಮೂಲಿ ಜಾಗಕ್ಕೆ ಹೋಗುತ್ತಾರೆ,
ಅಲ್ಲಿ ಬೀಗ ಹಾಕಿದ್ದನ್ನು ನೋಡಿ ಪೆಚ್ಚು ಮೋರೆ
ಹಾಕಿಕೊಂಡು ವಾಪಸ್ಸಾಗುತ್ತಾರೆ. ಆಶ್ಚರ್ಯವೆಂದರೆ ದಿನವೂ ಹೀಗೆಯೇ ಆಗಿ ಬಿಟ್ಟಿದೆ ಅವರ ವರ್ತನೆ. ಹೀಗಾದರೆ ನಾಳೆ ಅವರ ಮಾನಸಿಕ ಸ್ಥಿತಿ ಹೇಗೋ ಏನೋ ಎಂಬ ಭಯ- ಕಳವಳ ಸಂತ್ರಸ್ತರ ಮಡದಿ-ಮಕ್ಕಳಿಗೆ ಕಾಡುತ್ತಿದೆಯಂತೆ.?
ಸಾಮೂಹಿಕವಾಗಿ ಮದ್ಯಪಾನ ತ್ಯಜಿಸಿದರೆ ಸರ್ಕಾರದ ಆದಾಯ, ಹಣಕಾಸಿನ
ಸ್ಥಿತಿ-ಗತಿ, ದೇಶದ ಜನತೆಯ ಅಭಿವೃದ್ಧಿಯ ಗತಿಯೇನು? ಎಂಬ ಚಿಂತೆ ಅಷ್ಟೇ…
ತೀರಾ ಹಚ್ಚಿಕೊಂಡಂತ ಕೆಲವರು, ಬಾರುಗಳಿಗೇ ಕನ್ನಹಾಕುವ ಕೆಲಸಕ್ಕೂ ಕೈಹಾಕಿದ್ದಾರೆ. ಅಲ್ಲಿನ ಗಲ್ಲೆಯಲ್ಲಿ ಲಕ್ಷ-ಲಕ್ಷ ನೋಟಿನ ಕಂತೆ ಇದ್ದರೂ ಮುಟ್ಟದೆ, ಬರೀ ಬಾಟಲುಗಳನ್ನು ಮಾತ್ರ ದೋಚಿ, ಕುಡುಕರಿಗೆ ಇರುವ ನಿಯತ್ತನ್ನು ಸಾಬೀತುಪಡಿಸಿದ್ದಾರೆ ಅಲ್ಲವೇ? ಬಯಲಲ್ಲಿ ಒಂದಕ್ಕೆರಡು-ಮೂರು ಬೆಲೆ ತೆತ್ತು ಬ್ಲಾಕ್ನಲ್ಲಿ ಕೊಳ್ಳುವವರೂ ಇದ್ದಾರೆ, ಪೊಲೀಸರ ಮುಂದೆ ಅವರ ಬಿಕರಿ ಆಟ ನಡೆಯುತ್ತಿಲ್ಲ. ಆದರೆ ಒಳಗೆ ಏನೇನು ನಡೆಯುತ್ತಿದೆಯೋ ಗೊತ್ತಿಲ್ಲ. ನಾವೂ ಸಹ ಒಂಥರಾ ‘ಹೋಂ ಕ್ವಾರಂಟೈನಲ್ಲಿ’ ಇದ್ದೇವೆ ಅನಿಸುತ್ತಿದೆ ಎಂಬುದು ಬಹಳಷ್ಟು ಪಾನಪ್ರಿಯ ಗಿರಾಕಿಗಳ ಕಳವಳ.
ಇನ್ನೂ ಎಷ್ಟು ದಿನ ಈ ಸಜೆ ? ಎಂಬ ಚಿಂತೆ ಯಲ್ಲಿ ಹೈರಾಣಾಗಿ ಬಿಟ್ಟಿದ್ದಾರೆ.
ಯಾವುದೇ ಕೆಲಸ ಆಗಿರಲಿ ನಿರಂತರವಾಗಿ ಮಾಡುತ್ತಿದ್ದರೆ ಮಾತ್ರ ಸಖ್ಯದಲ್ಲಿ ಇರುತ್ತದೆ. ಇದು ಸಹಜ. ಸ್ವಲ್ಪ ದಿನ ಆ ಕಡೆ ಗಮನ ಕೊಡದಿದ್ದರೆ ಅದು ವೃತ್ತಿ, ಪ್ರವೃತ್ತಿ, ಹವ್ಯಾಸ, ಚಟ ಏನೇ ಇರಲಿ ನಮ್ಮಿಂದ ದೂರವಾಗುವ, ಮರೆತುಹೋಗುವ ಸಾಧ್ಯತೆ ಹೆಚ್ಚಾಗುತ್ತದೆ ಅಲ್ವಾ ಒಡೆಯ?
ನಾಟಕ ಕಲಾವಿದ ನಾಟಕವನ್ನು, ಸಂಗೀತಗಾರ ಸಂಗೀತವನ್ನು ನಿತ್ಯ ಅಭ್ಯಾಸ ಮಾಡದೇ ಹೋದರೆ ಕಲಿತ ಸಂಭಾಷಣೆ ಹಾವ-ಭಾವ, ಸ್ವರ- ರಾಗದ ಲಯ ತಪ್ಪುತ್ತದೆ ಅಲ್ಲವೇ, ಹಾಗೆಯೇ ಆ ಪರಿಸ್ಥಿತಿ ತಮಗೂ ಬರಬಹುದೇನೋ ಎಂಬ ಆತಂಕದಲ್ಲಿ ಇದ್ದಾರೆ.
`ಮಧು’ ಸಿಗದೇ, ಈಗಾಗಲೇ ಹೆಚ್ಚುಕಡಿಮೆ ತಿಂಗಳಾಗುತ್ತಾ ಬಂತು. ನಮಗೆಲ್ಲ ಈ ಒಂದು ಅಭ್ಯಾಸ ಇತ್ತು ಎನ್ನುವುದೇ ಮರೆತು ಹೋಗಿದೆ ಎನ್ನುವ ಜನ ಸಹ ಕಾಣತೊಡಗಿದ್ದಾರೆ. ಅವರೆಲ್ಲ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಬಹಳ ಖುಷಿಯಿಂದ ಇದ್ದಾರೆ. ಜೇಬು ಸಹ ಖಾಲಿಯಾಗದೆ ಹಾಗೆಯೇ ಇದೆ ಎನ್ನುತ್ತಿರುವ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಮದ್ಯಪಾನ ತ್ಯಜಿಸಿದರೆ ಎಷ್ಟೆಲ್ಲಾ ಅನುಕೂಲತೆಗಳು! ದೇಹಾರೋಗ್ಯ, ಮನಸ್ಸಿನ ಆರೋಗ್ಯ, ಶಾಂತಿ- ನೆಮ್ಮದಿ ಜೊತೆಗೆ ಹಣದ ಉಳಿತಾಯ. ಕುಟುಂಬದ ಜೊತೆ ಸಂತಸದ ಜೀವನ, ಸಾಮಾಜಿಕ ಗೌರವವನ್ನು ಗಮನಿಸಿರುವ ಬಹಳಷ್ಟು ಜನ ಎಣ್ಣೆಯನ್ನು ಬಿಟ್ಟು ಬಿಡುವ ಪ್ರತಿಜ್ಞೆ ಮಾಡಿದ್ದಾರಂತೆ.
ಹೀಗೆ ಅವರೆಲ್ಲ ಸೇರಿ, ಮನಸ್ಸು ಮಾಡಿ ಎಣ್ಣೇನೇ ತ್ಯಾಗ ಮಾಡಿಬಿಟ್ಟರೆ, ಆಮೇಲೆ ನಿಮ್ಮ ಗತಿ ಏನು? ಅದೇ ನನಗೆ ಚಿಂತೆ.
`ಹಲೋ..ಹಲೋ.. ಅದೇನು ಹೇಳಪ ತೀರ್ಥೇಶ?’ ದೊರೆ ದಡಬಡಿಸಿದ.
ಏನಿಲ್ಲ ದೊರೇ, ಹೀಗಾದರೆ ನಿಮ್ಮ ಆದಾಯ, ಹಣಕಾಸಿನ ಸ್ಥಿತಿ-ಗತಿ, ದೇಶದ ಜನತೆಯ ಅಭಿವೃದ್ಧಿಯ ಗತಿಯೇನು? ಎಂಬ ಚಿಂತೆ ಅಷ್ಟೇ… ಮಾತು ಮುಗಿಸಿದ ತೀರ್ಥೇಶ.
ಅಬ್ಬಾ! ಕೊರೊನಾ ವೈರಸ್ ಗೆ ಇಂತಹ ಶಕ್ತಿಯೂ ಇದೆಯಾ? ಎಂದು ಅಚ್ಚರಿಯಿಂದ ಸುಸ್ತಾದ ದೊರೆ !
ಉತ್ತಂಗಿ ಕೊಟ್ರೇಶ್
uttangi.kotresh123@gmail.com