ನಿಂದಿಸುವವರು ನೀನಿರುವ ತನಕ ನಿಂದಿಸುತ್ತಾರೆ

ನಿಂದಿಸುವವರು ನೀನಿರುವ ತನಕ ನಿಂದಿಸುತ್ತಾರೆ
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ.
📞 : 9448395594.   swamiji.ps@gmail.com

ಕಾಣಬಹುದೇ ಪರುಷದ ಗಿರಿ ಅಂಧಕಂಗೆ?
ಐದು ಸರ್ಪಗಳಿಗೆ ತನು ಒಂದು, ದಂತವೆರಡು.
ಸರ್ಪ ಕಡಿದು ಸತ್ತ ಹೆಣ ಸುಳಿದಾಡುವುದ ಕಂಡೆ.
ಈ ನಿತ್ಯವನರಿಯದ ಠಾವಿನಲ್ಲಿ, ಭಕ್ತಿಯೆಲ್ಲಿಯದೊ ಗುಹೇಶ್ವರಾ?
ಸಾಧಕನಲ್ಲಿ ಭಕ್ತಿ ಅರಳಲು ಆತ ಮಾಡಬೇಕಾದದ್ದೇನು ಎನ್ನುವ ರಹಸ್ಯ ಪ್ರಭುದೇವರ ಈ ವಚನದಲ್ಲಿದೆ. ಐದು ಸರ್ಪಗಳ ವಾಸಸ್ಥಾನ ಮಾನವನ ದೇಹ. ಪಂಚೇಂದ್ರಿಯಗಳೇ (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ) ಸರ್ಪಗಳು. ಅಹಂಕಾರ ಮತ್ತು ಮಮಕಾರ ಎರಡು ಹಲ್ಲುಗಳಿವೆ. ಪಂಚೇಂದ್ರಿಗಳು ಕಚ್ಚಿದಾಗ ಹೊರಹೊಮ್ಮುವುದು ಭಯಂಕರ ವಿಷವೇ ಹೊರತು, ಅಮೃತವಲ್ಲ. ವಿಷವೇರಿದಾಗ ಮನುಷ್ಯ ಸಾಯಬೇಕು. ಆದರೂ ಆತ ಸಾಯದೆ ಆರಾಮಾಗಿ ಓಡಾಡುತ್ತಿದ್ದಾನೆ. ಅಂದರೆ ಪಂಚೇಂದ್ರಿಯಗಳು ಪಂಚ ವಿಷಯಗಳ ಉರುಳಿಗೆ ಸಿಕ್ಕು ನಾನು, ನನ್ನಿಂದ ಎನ್ನುವ ಅಹಂಕಾರ, ಮಮಕಾರಗಳಿಗೆ ಮಾನವನನ್ನು ಸಿಲುಕಿಸಿ ಅವನ ಬದುಕನ್ನೇ ನಾಶ ಮಾಡುತ್ತಿದ್ದರೂ ಆತನಿಗೆ ಅದರ ಅರಿವಿಲ್ಲ. ವಿವೇಕಿಯಾದವ ಈ ಸತ್ಯವನ್ನು ಅರಿತು ಅಹಂಕಾರ, ಮಮಕಾರ ಎನ್ನುವ ಹಲ್ಲುಗಳನ್ನು ಮುರಿದು, ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿದರೆ ಭಕ್ತಿ ಅರಳುವುದು ಎನ್ನುವ ಸತ್ಯವನ್ನು ಬಹು ಸೊಗಸಾಗಿ ಅನಾವರಣ ಮಾಡಿದ್ದಾರೆ ಪ್ರಭುದೇವರು. ಲೌಕಿಕ ವಿಷಯ ವಾಸನೆಗಳ ಹೊಂಡದಲ್ಲಿ ಮುಳುಗಿದವರಿಗೆ ಪ್ರಭುದೇವರ ಬೆಡಗಿನ ನುಡಿಗಳು ಅರ್ಥವಾಗುವುದು ಕಷ್ಟಸಾಧ್ಯ. ಅರ್ಥವಾದರೂ ಅರಗಿಸಿಕೊಳ್ಳುವುದು ಇನ್ನೂ ಕಷ್ಟ. ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿ ಅಹಂಕಾರ, ಮಮಕಾರಗಳೆಂಬ ಹಲ್ಲುಗಳನ್ನು ಮುರಿದು ರಾಜಮಾರ್ಗದಲ್ಲಿ ತಮ್ಮಪಾಡಿಗೆ ತಾವು ನಡೆಯುವವರನ್ನು ಅನುಮಾನದಿಂದ ನೋಡುವ ಕಾಮಾಲೆ ಕಣ್ಣುಗಳಿಗೇನೂ ಬರವಿಲ್ಲ. ಅದನ್ನೇ ಮಹಾದೇವಿಯಕ್ಕ ನವರು `ಭಕ್ತಿಯುಳ್ಳವರ ಬೈವರೊಂದು ಕೋಟಿ, ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುವಳು.
ಇತ್ತೀಚಿನ ದಿನಮಾನಗಳಲ್ಲಂತೂ ಮನುಷ್ಯನ ವರ್ತನೆಗಳೇ ಅರ್ಥವಾಗುವುದಿಲ್ಲ. ಹುಲಿ, ಕರಡಿ, ಸಿಂಹ ಇತ್ಯಾದಿ ಕಾಡು ಪ್ರಾಣಿಗಳು ತಮ್ಮ ಗುಣ-ಸ್ವಭಾವಗಳನ್ನು ಯಾವತ್ತೂ ಬದಲಾಯಿಸಿಕೊಳ್ಳುವುದಿಲ್ಲ. ಹಾಗಾಗಿ ಅವುಗಳನ್ನು ನಂಬಬಹುದು. ಆದರೆ ಮಾನವ ಎನ್ನುವ ಈ ಪ್ರಾಣಿಯ ವರ್ತನೆಗಳನ್ನು ನಂಬುವುದು ಅಸಾಧ್ಯ. ಅವನದು ಮುಖವಾಡದ ಬದುಕು. ಯಾವಾಗ ಯಾವ ಮುಖವಾಡ ಧರಿಸುತ್ತಾನೆಂದು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ತನಗೆ ಅನುಕೂಲವಾಗುವಂತಿದ್ದರೆ ತಾನೇ ಮೈಮೇಲೆ ಬಿದ್ದು ಮಾತನಾಡಿಸಿ ತನ್ನ ಕೆಲಸ ಕಾರ್ಯಗಳನ್ನು ನಯವಾಗಿಯೇ ಮಾಡಿಸಿಕೊಳ್ಳುವನು. ಇತರರನ್ನು ದೂರುವನು. ನೀವು ಮೆಚ್ಚುವಂತಹ ಮಾತುಗಳನ್ನೇ ಆಡುವನು. ಕೆಲಸ ಮುಗಿದ ನಂತರ ತಿರುಗಿಯೂ ನೋಡದಿರಬಹುದು. ಅಷ್ಟಿದ್ದರೆ ಚಿಂತೆಯಿಲ್ಲ. ಉಪಕಾರ ಪಡೆದವನೇ ಏನೇನೋ ಕಾರಣಕ್ಕೆ ತನ್ನ ವರ್ತನೆಗಳನ್ನೇ ಬದಲಾಯಿಸಿಕೊಂಡು ಅಮಾನವೀಯವಾಗಿ ವರ್ತಿಸಲಾರಂಭಿಸಿದರೆ?! ಇಂಥವರನ್ನು ಕಂಡೇ ಬಸವಣ್ಣನವರು `ಹೊಯಿದವರೆನ್ನ ಹೊರೆದವರೆಂಬೆ, ಬಯ್ದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ-ತಾಯಿಗಳೆಂಬೆ, ಅಳಿಗೊಂಡವರೆನ್ನ ಆಳ್ದರೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಎಂದಿರಬೇಕು. ಮನುಷ್ಯ ಹೊಗಳಿಕೆ, ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಆದರೆ ಇದು ಹೇಳಿದಷ್ಟು ಸುಲಭ ಅಲ್ಲ. ಹೊಗಳಿಕೆಯನ್ನೇನೋ ಸ್ವೀಕರಿಸಬಹುದು. ತೆಗಳಿಕೆಯನ್ನು ಸ್ವೀಕರಿಸುವುದು ಹೇಗೆ? ತೆಗಳಿಕೆ ಕೆಲವೊಮ್ಮೆ ಆ ವ್ಯಕ್ತಿಯ ತೇಜೋವಧೆ ಮಾಡುವಂತಿದ್ದರೆ ಅದನ್ನು ಸ್ವೀಕರಿಸಲು ಎಲ್ಲರಿಂದಲೂ
ಸಾಧ್ಯವಾಗದು. ನಿರ್ಲಿಪ್ತತೆ, ಸಮಚಿತ್ತ ಎಂದು ಹೇಳುವುದು ಸುಲಭ. ಅರಗಿಸಿಕೊಳ್ಳುವುದು ಕಷ್ಟ.

ಕೋಣನ ಹೇರಿಂಗೆ ಕುನ್ನಿ ಬುಸುಕುತ್ತ ಬರುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು.
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ.
ಆದರ್ಶ ಪಥದಲ್ಲಿ ಸಾಗಿ ಸತ್ಕಾರ್ಯಗಳಲ್ಲಿ ಕಾಲದ ಸದುಪಯೋಗ ಮಾಡಿಕೊಳ್ಳುವ, ಇತರರನ್ನೂ ತಮ್ಮ ಮಾರ್ಗದಲ್ಲೇ ಕರೆದೊಯ್ಯಲು ಪ್ರಯತ್ನಿಸುವ ವ್ಯಕ್ತಿಗಳನ್ನು ಮೆಚ್ಚುವವರು ಇರುವ ಹಾಗೆ ಮೆಚ್ಚದಿರುವವರೂ ಇರಬಹುದು. ಮೆಚ್ಚದಿರಲು ಕಾರಣಗಳೇ ಬೇಕಿಲ್ಲ. ನಿಮ್ಮ ಒಳ್ಳೆಯತನವೇ ಅವರಿಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಮುರಿದಂತೆ ಆಗಬಹುದು. ಅಂಥವರ ಮುಖಕ್ಕೆ ಹಿಡಿದ ಕನ್ನಡಿಯಂತಿದೆ ಬಸವಣ್ಣನವರ ಈ ವಚನ. ಕೋಣವೊಂದು ಭಾರವನ್ನು ಹೊತ್ತು ದಾರಿಯಲ್ಲಿ ಗಂಭೀರವಾಗಿ ನಡೆಯುತ್ತಿರುತ್ತದೆ. ಅದನ್ನು ಕಂಡ ನಾಯಿಯೊಂದು ಅದರ ಮುಂದೆ ನಿಂತು ಬೊಗಳುವುದು. ಕೋಣ ಮುಂದೆ ಸಾಗದಂತೆ ಅಡ್ಡಗಾಲು ಹಾಕುವುದು. ಬೊಗಳುತ್ತಾ ಬೊಗಳುತ್ತಾ ತಾನೇ ಉಸಿರಾಡಲು ಕಷ್ಟಪಡುವುದು. ಇಂತಹ ನಾಯಿಯ ಸ್ವಭಾವದವರು ಬೇಕಾದಷ್ಟು ಜನರು. ಅವರು ತಾವೂ ನಂಬರು, ನಂಬುವವರಿಗೂ ನಂಬದಂತೆ ಕಿವಿ ಕಚ್ಚುವರು. ಹಾಗಂತ ಮನಮೆಚ್ಚುವ, ಜನಮೆಚ್ಚುವ ಕೆಲಸ ಮಾಡುವರೇ? ಕೆಲವರಿಗೆ ಇತರರ ಸತ್ಕಾರ್ಯಗಳನ್ನು ಮೆಚ್ಚುವುದಿರಲಿ; ಸಹಿಸುವ ಗುಣವೂ ಇರುವುದಿಲ್ಲ. ಅಂಥವರನ್ನು ಭಗವಂತ ನರಕದಲ್ಲಿಕ್ಕುವ ಎನ್ನುವ ನಂಬುಗೆ ಬಸವಣ್ಣನವರದು. ಹೌದು, ಮನುಷ್ಯ ತಾನು ಮಾಡಬೇಕಾದ್ದನ್ನು ಮಾಡಬೇಕು. ನಾಯಿ ಬೊಗಳುತ್ತದೆ ಎಂದು ಅದಕ್ಕೆ ಅಂಜುವ ಅಗತ್ಯವಿಲ್ಲ. ವಾಹನದಲ್ಲಿ ಹೋಗುವಾಗ ನಾಯಿ ಬೊಗಳುತ್ತಾ ಸ್ವಲ್ಪ ದೂರ ಬೆನ್ನಟ್ಟುವುದು. ಓಡೋಡಿ ಬರುವುದು. ಕೊನೆಗೆ ಓಡಿ ಓಡಿ ಸುಸ್ತಾಗುತ್ತಲೇ ದಸ ದಸ ತೇಕುತ್ತ ಹಿಂತಿರುಗುವುದು. ವ್ಯಕ್ತಿ ಲೋಕಾಪವಾದ, ನಿಂದೆಗಳಿಗೆ ಅಂಜಬೇಕಾಗಿಲ್ಲ. ಆತ ಅಂಜಬೇಕಾಗಿರುವುದು ತನ್ನ ಅಂತರಾತ್ಮಕ್ಕೆ. ತಾನೇನೆಂಬುದು ತನಗೆ ಗೊತ್ತಿರುತ್ತದೆ. ಜನಕಂಜಿ ನಡೆಯುವುದಕ್ಕಿಂತ ಮನಕಂಜಿ ನಡೆಯುವುದು ಮೇಲು. ಒಬ್ಬ ವ್ಯಕ್ತಿ ಎಷ್ಟೇ ಒಳ್ಳೆಯವನಾಗಿ ನಡೆದುಕೊಂಡರೂ ಅವನನ್ನು ಸಹಿಸದ ಜನರು ಇನ್ನಿಲ್ಲದ ಅಪವಾದ ಮಾಡುವುದು ಸಹಜ. ಅವರು ಮಾಡುವ ಅಪವಾದಗಳಲ್ಲಿ ಹುರುಳಿಲ್ಲದಿದ್ದರೂ `ತಾನು ಹಿಡಿದ ಮೊಲಕ್ಕೆ ಮೂರು ಕೊಂಬು ಎನ್ನುವಂತೆ ವರ್ತಿಸುವರು. ನಾವು ಎಂ.ಎ. ಪದವಿ ಪೂರೈಸಿದ ಸಂದರ್ಭದಲ್ಲಿ ನಡೆದ ಒಂದು ಘಟನೆ ನೆನಪಾಗುವುದು. ಆಗ ಒಬ್ಬ ದುರಾತ್ಮ ನಮ್ಮ ಗುರುಗಳಿಗೆ (ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು) ಒಂದು ಮೂಕರ್ಜಿ ಬರೆದಿದ್ದ.
ಅದರಲ್ಲಿ ನಮ್ಮ ಪ್ರಸ್ತಾಪ ಮಾಡಿ ಈ ಹುಡುಗನನ್ನು `ಸ್ವಾಮಿ’ ಮಾಡಿಕೊಳ್ಳಲು ಹೊರಟಿದ್ದೀರಿ. ಆತ ಮೈಸೂರಲ್ಲಿ ಏನೇನು ಮಾಡಿದ್ದಾನೆಂದು ನಿಮಗೆ ಗೊತ್ತೇ? ಇಂಥವನನ್ನು ಸ್ವಾಮಿ ಮಾಡಿಕೊಂಡರೆ ಮಠದ ಗತಿ ಏನು ಎಂದೆಲ್ಲ ಕೀಳು ಪದಗಳನ್ನು ಬಳಸಿದ್ದ. ಆ ಪತ್ರವನ್ನು ನಮ್ಮ ವಿದ್ಯಾಗುರುಗಳಾಗಿದ್ದ ಶರಣ ಟಿ.ಎಸ್. ಪಾಟೀಲರ ಕಡೆ ಗುರುಗಳು ಕೊಟ್ಟು `ನಿಮ್ಮ ಶಿಷ್ಯನ ಬಗ್ಗೆ ಒಂದು ಪ್ರಶಸ್ತಿ ಪತ್ರ ಬಂದಿದೆ ನೋಡಿ’ ಎಂದಿದ್ದಾರೆ. ಪಾಟೀಲರು ಆ ಪತ್ರ ನೋಡಿ ವಾಪಾಸ್ ಗುರುಗಳ ಕಡೆ ಕೊಡಲು ಹೋದಾಗ `ಪತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಲಿಲ್ಲವಲ್ಲ ಎಂದಿದ್ದಾರೆ. `ತಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ ಬುದ್ಧಿ ಎಂದು ಪಾಟೀಲರು ಹೇಳಿದ್ದಾರೆ. `ಹಾಗಿದ್ದ ಮೇಲೆ ಅದನ್ನೇಕೆ ನಮಗೆ ಕೊಡುತ್ತೀರಿ? ಹರಿದು ಕಸದ ಬುಟ್ಟಿಗೆ ಎಸೆಯಿರಿ’ ಎಂದಿದ್ದಾರೆ.
ಮೊನ್ನೆ ಅಂಥದೇ ಒಂದು ಪತ್ರ ನಮ್ಮ ಹೆಸರಿಗೆ ಬಂದಿದೆ. ಅದನ್ನು ನಮ್ಮ ಸಹಾಯಕ ನೋಡಿ ತುಂಬಾ ಆಘಾತಕ್ಕೊಳಗಾಗಿ ಮುಂದೇನು ಮಾಡಬೇಕೆಂದು ತಿಳಿಯದೆ ಕಣ್ಣೀರು ಸುರಿಸುತ್ತಾ ಊಟ, ತಿಂಡಿ ಬಿಟ್ಟು ಮಂಕಾಗಿದ್ದಾನೆ. ಇದು ನಮಗೆ ಗೊತ್ತಾಯ್ತು. ಏನು ಪತ್ರ ಬಂದಿದೆ ಎಂದು ಕೇಳಿದಾಗ ಅವನಿಗೆ ಮಾತನಾಡಲೂ ಆಗುತ್ತಿಲ್ಲ. ಬಿಕ್ಕಳಿಸಿ-ಬಿಕ್ಕಳಿಸಿ ಅಳುತ್ತ `ಅದನ್ನು ತಾವು ನೋಡಬಾರದು ಬುದ್ಧಿ’ ಎಂದ. ಅದೇನು ಹೆಸರು ಹಾಕಿ ಬರೆದಿರುವ ಪತ್ರವೇ ಅಥವಾ ಮೂಕರ್ಜಿಯೇ ಎಂದಾಗ `ಮೂಕರ್ಜಿ ಬುದ್ಧಿ’ ಎಂದ. ಅದನ್ನು ತರಿಸಿಕೊಂಡು ಅದರಲ್ಲೇನಿದೆ ಎಂದು ನೋಡಿದೆವು. ಯಾವನೋ ಒಬ್ಬ ಪಾಪಿಷ್ಠ ಯಾರದೋ ಪ್ರೇರಣೆಯ ಮೇರೆಗೆ ಆ ಪತ್ರ ಬರೆದಿದ್ದಾನೆ ಎನ್ನಿಸಿತು. ಆತ ಮುಂದಿನ ಪತ್ರದಲ್ಲಿ ವಿವರ ತಿಳಿಸುತ್ತೇನೆ ಎಂದು ಬೇರೆ ಹೆದರಿಸಿದ್ದಾನೆ. `ಈ ವಯಸ್ಸಿನಲ್ಲಿ ತಾವು ಇಂಥದನ್ನು ಕೇಳಬೇಕಾಯ್ತಲ್ಲ ಬುದ್ಧಿ ಎಂದು ನಮ್ಮ ಸಹಾಯಕ ದುಃಖಿಸುತ್ತಿದ್ದ. ಅವನಿಗೆ ಸಮಾಧಾನ ಮಾಡುತ್ತ ಇವೆಲ್ಲ ಮೂಢರು, ಮೂರ್ಖರು ಮಾಡುವ ಕೆಲಸ. ಇಂಥವುಗಳಿಗೆಲ್ಲ ಅಳುತ್ತಾ ಕುಳಿತರೆ ಸತ್ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಬೇಕು. ಆಗ ಅದನ್ನು ಬರೆದವನು ಅಥವಾ ಬರೆಸಲು ಕಾರಣವಾದವನು ಇಬ್ಬರೂ ತೊಂದರೆ ಅನುಭವಿಸುವರು. `ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದೆಲ್ಲ ಹೇಳಿ ಆತನಿಗೆ ಸಮಾಧಾನ ಮಾಡಬೇಕಾಯಿತು.
ಕಾಣದ ಠಾವಿನಲ್ಲಿ ಜರಿದರೆಂದಡೆ
ಕೇಳಿ ಪರಿಣಮಿಸಬೇಕು. ಅದೇನು ಕಾರಣ?
ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ!
ಎನ್ನ ಮನದ ತದ್‍ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ.
ಲೋಕಾಪವಾದ, ನಿಂದೆಗಳು ಯಾರಿಗೂ ಬಿಟ್ಟಿದ್ದಲ್ಲ. ಬಸವಣ್ಣನವರು ಸಹ ಇದರಿಂದ ಹೊರತಾಗಿರಲಿಲ್ಲ. ಹಾಗಾಗಿ ಯಾರಾದರೂ ನಮ್ಮ ಹಿಂದೆ-ಮುಂದೆ ನಮ್ಮ ಬಗ್ಗೆ ಹಗುರವಾಗಿ ಆಡಿಕೊಳ್ಳುತ್ತಾರೆ ಎಂದರೆ ಅದನ್ನು ಕೇಳಿ ಸಂತೊಷಪಡಬೇಕಂತೆ. ಕಾರಣ ಅವರಿಗೆ ನಾವೇನೂ ಕೊಟ್ಟಿಲ್ಲ, ಅವರಿಂದ ಪಡೆದಿಲ್ಲ. ಆದರೂ ಅವರಿಗೆ ಸಂತೋಷವಾಗುತ್ತದೆಯಲ್ಲ! ಬದಲಾಗಿ ನಮ್ಮ ತೇಜೋವಧೆ ಮಾಡುವಂತೆ ವ್ಯವಹರಿಸಿರುವನಲ್ಲ ಎಂದು ಆತನನ್ನು ದ್ವೇಷಿಸಬೇಕಾಗಿಲ್ಲ. ಅದು ಕಾರಣವೇ ನನ್ನ ಮನಸ್ಸಿನ ದ್ವೇಷವನ್ನು ಅಳಿಸಿ, ಶರಣರಿಗೆ ಶರಣೆಂಬುದ ಕರುಣಿಸು ಎಂದು ಬಸವಣ್ಣನವರು ದೇವರಲ್ಲಿ ಪ್ರಾರ್ಥಿಸುವರು. ನಿಂದಕರ ಮಾತುಗಳಿಗೆ ಸೊಪ್ಪು ಹಾಕದೆ, ಶರಣರ ಸತ್ಸಂಗದಲ್ಲಿ, ಸದ್ಗೋಷ್ಠಿಯಲ್ಲಿ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಬೇಕು. ಏಕೆಂದರೆ ನಮ್ಮ ದೋಷಗಳನ್ನು ನೇರವಾಗಿ ಹೇಳುವವರೇ ನಿಜವಾದ ಹಿತೈಷಿಗಳು. ಹಾಗೆ ನೇರವಾಗಿ ಹೇಳದೆ ಚಾಡಿ ಮಾತುಗಳಿಗೆ ಕಿವಿಗೊಟ್ಟು ಮೂಕರ್ಜಿ ಬರೆಯುವವರು, ಹಿಂದೆ-ಮುಂದೆ ಆಡಿಕೊಳ್ಳುವವರು ಒಂದು ರೀತಿಯ ಮನೋರೋಗಿಷ್ಟರು. ಅಂಥವರನ್ನು ಕುರಿತೇ ಘಟ್ಟಿವಾಳಯ್ಯನವರು ಗಟ್ಟಿಯಾದ ಮಾತುಗಳನ್ನೇ ಹೇಳಿದ್ದಾರೆ:
ರೋಗಿಗೆ ಹಾಲು ಸಿಹಿಯಪ್ಪುದೆ?
ಗೂಗೆಗೆ ರವಿ ಲೇಸಪ್ಪುದೆ?
ಚೋರಂಗೆ ಬೆಳಗು ಗುಣವಪ್ಪುದೆ?
ಭವಸಾಗರದ ಸಮಯದಲ್ಲಿದ್ದವರು
ನಿರ್ಭಾವನ ಭಾವವನೆತ್ತ ಬಲ್ಲರು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
ವೈದ್ಯರು ರೋಗಿಗೆ ಕರಿದ, ಹುರಿದ, ಜಿಡ್ಡು ಪದಾರ್ಥಗಳನ್ನು ತಿನ್ನಬೇಡ. ಅಮೃತ ಸಮಾನವಾದ ಹಾಲನ್ನು ಮಾತ್ರ ಕುಡಿ ಎಂದರೆ ಅವನಿಗೆ ಹಾಲು ರುಚಿಸುವುದಿಲ್ಲ. ಆತ ಕರಿದ, ಹುರಿದ ಪದಾರ್ಥಗಳನ್ನೇ ಬಯಸಿ ತಾನೇ ಮತ್ತಷ್ಟು ರೋಗವನ್ನು ಉಲ್ಬಣಿಸಿಕೊಳ್ಳುವನು. ಗೂಗೆಗೆ ಹಗಲು ಹೊತ್ತಿನಲ್ಲಿ ಕಣ್ಣು ಕಾಣುವುದಿಲ್ಲವಂತೆ. ಅದಕ್ಕೆ ಕತ್ತಲೆ ಎಂದರೆ ಬಲು ಪ್ರೀತಿ. ಹಾಗಾಗಿ ಅದು ಬೆಳಕನ್ನು ದ್ವೇಷಿಸುವುದು. ಅದೇ ರೀತಿ ಕಳವು ಮಾಡುವ ವ್ಯಕ್ತಿಗೆ ಕತ್ತಲೆ ಇಷ್ಟವೇ ಹೊರತು ಬೆಳಕಲ್ಲ. ಅಂತೆಯೇ ವಿಷಯವಾಸನೆಯ ಸಾಗರದಲ್ಲಿ ಮುಳುಗಿ ಒದ್ದಾಡುವ ವ್ಯಕ್ತಿಗೆ ಶಿವನ ಸಾಮೀಪ್ಯ ಬೇಕಾಗುವುದಿಲ್ಲ. ಇದೆಲ್ಲವೂ ದುಷ್ಟ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಸಾತ್ವಿಕರು ಯಾವಾಗಲೂ ಒಳ್ಳೆಯದನ್ನೇ ಚಿಂತಿಸುತ್ತಾ ಕೆಟ್ಟದ್ದರಲ್ಲೂ ಒಳಿತನ್ನು ಹುಡುಕುವ ಕಾರ್ಯ ಮಾಡುವರು. ಪಿಸುಣರು ಒಳ್ಳೆಯದರಲ್ಲೂ ಕೆಟ್ಟದ್ದನ್ನೇ ಹುಡುಕುವ ಅತೀ ಬುದ್ಧಿವಂತಿಕೆ ತೋರುವರು. ಹಾಗಾಗಿ ಅಂಥವರ ಬಗ್ಗೆ ಉದಾಸೀನ ಮಾಡಬೇಕು ಎನ್ನುವುದು ಹಿರಿಯರ ಅನುಭವದ ಮಾತು. ನಿಂದಿಸುವುದನ್ನೇ ಒಂದು ಉದ್ಯೋಗ ಮಾಡಿಕೊಂಡವರನ್ನು ಕಂಡು ನಮ್ಮ ಗುರುಗಳು 1937-38ರ ಅವರ ದಿನಚರಿಯಲ್ಲಿ ದಾಖಲಿಸಿರುವ ಮುಂದಿನ ಮಾತುಗಳು ಮನೋಬಲ ಹೆಚ್ಚಿಸುವಂತಿವೆ: `ಜನರ ಅಪವಾದಗಳಿಗಂಜಬೇಡ. ಸ್ವಾರ್ಥವು ಸಿಗದಿದ್ದರೆ ದೂಷಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ; ಉಗುಳುವಿಕೆಗೂ ಬೆಲೆಯಿಲ್ಲ. `ನಿಂದಿಸುವವರು ನೀನಿರುವ ತನಕ ನಿಂದಿಸುತ್ತಾರೆ. ಕಡೆಗೆ ಸುಮ್ಮನಾಗುತ್ತಾರೆ. ನಾಯಿಗಳು ಹೆದರುವವನನ್ನು ಕಂಡರೆ ಬಹಳವಾಗಿ ಬೊಗಳುತ್ತವೆ. ಕೈಯಲ್ಲಿ ದೊಣ್ಣೆಯುಳ್ಳವನನ್ನು ಕಂಡರೆ ದಿಕ್ಕಾಪಾಲಾಗಿ ಓಡುತ್ತವೆ.
`ಪರರ ನಿಂದೆಗೆ ವೃಥಾ ವ್ಯಾಕುಲ ಪಡಬೇಡ. ನಿನ್ನಲ್ಲಿ ದೋಷವನ್ನು ಕಂಡು ಯಾರೂ ನಿಂದಿಸುವುದಿಲ್ಲ. ತಮ್ಮ ಸ್ವಾರ್ಥವು ಸಿಗದ ಕಾರಣ ನಿಂದಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅಂಥವರ ನಿಂದಾಪ್ರಶಂಸೆಗಳಿಗೆ ಬೆಲೆಯೇ ಇಲ್ಲ.
ಕಾಣಬಹುದೆ ಪರುಷದ ಗಿರಿ ಅಂಧಕಂಗೆ?
ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ?
ತೆಗೆಯಬಹುದೆ ಕಡವರವು ದಾರಿದ್ರಂಗೆ?
ಕರೆಯಬಹುದೆ ಕಾಮಧೇನು ಅಶುದ್ಧಂಗೆ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣು ಮಾಡಿಕೊಂಡಡೆ ಹೋಲಬಹುದೆ?
ಎನ್ನೊಡೆಯ ಕೂಡಲಸಂಗನ ಶರಣರನು
ಪುಣ್ಯವಿಲ್ಲದೆ ಕಾಣಬಹುದೆ…?