December 7, 2022
Janathavani

ಮಧ್ಯ ಕರ್ನಾಟಕದ ಆಪ್ತ ಒಡನಾಡಿ

ಜಗಳೂರು : ಎಫ್‍ಪಿಒ ಗಳಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ

ಜಗಳೂರು, ಸೆ. 29- ರೈತರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರ್ಥಿಕವಾಗಿ ಸಬಲರಾಗಬೇಕಾದರೆ ರೈತ ಉತ್ಪಾದಕ ಕಂಪನಿಗಳಿಂದ ಮಾತ್ರ ಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ.ಬಿ.ಒ.ಮಲ್ಲಿಕಾರ್ಜುನ ಹೇಳಿದರು. 

ತಾಲ್ಲೂಕಿನ ಐತಿಹಾಸಿಕ ಕೊಣಚಗಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಬಿದರಕೆರೆ ಅಮೃತ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರಗಳು ದೂರದೃಷ್ಟಿಯ ಫಲವಾಗಿ ದಾವಣಗೆರೆ ಜಿಲ್ಲೆಯಲ್ಲಿ 18 ಕಂಪನಿ ಗಳನ್ನು ಸ್ಥಾಪನೆ ಮಾಡಲಾಗಿದೆ.  ಈ ಕಂಪನಿಗಳ ಮೂಲ ಉದ್ದೇಶವೇ ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡುವುದಾಗಿದೆ ಎಂದರು.

ರೈತರು ಬೆಳೆದ ಬೆಳೆಗಳನ್ನು  ಎಫ್‍ಪಿಓ ಮೂಲಕ ನೇರವಾಗಿ ಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿದೆ. ಮೆಕ್ಕೆಜೋಳ ಖರೀದಿಸಲು ಕಾರ್ಗಿಲ್ ಕಂಪನಿ ಮುಂದೆ ಬಂದಿದೆ. ರೈತರು ನೇರವಾಗಿ  ಕಂಪನಿಯ ಮೂಲಕವೇ ನಿಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ರೈತರು ಬೆಳೆದ ರಾಗಿ ದರ ಕೇವಲ ಕೆಜಿಗೆ 25 ರಂತೆ ಮಾರಾಟವಾಗುತ್ತದೆ. ಆದರೆ ಬೃಹತ್ ಮಾಲ್‍ಗಳಲ್ಲಿ ಒಂದು ಕೆಜಿ ರಾಗಿ ಹಿಟ್ಟಿಗೆ 65 ರೂ ಬೆಲೆಯಿದೆ. ಇದರಿಂದ ಮಾಲ್‍ ಗಳ ಮಾಲೀಕರಿಗೆ ಲಾಭವಾಗುತ್ತದೆ. ಆ ಕೆಲಸ ವನ್ನು ರೈತರು ಎಫ್‍ಪಿಗಳ ಮೂಲಕ ಮಾರಾಟ ಮಾಡಬೇಕು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಎಫ್‍ಪಿಓಗಳ ಯುಗ ಆರಂಭವಾಗಿದೆ. ಇದಕ್ಕೆ ಚನ್ನಗಿರಿಯ ತುಮ್ಕೋಸ್ ಉದಾಹರಣೆಯಾಗಿದೆ.

ತೋಟಗಾರಿಕೆ ತಜ್ಞ ಡಾ.ಎಂ.ಜಿ.ಬಸವನಗೌಡ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ವೆಂಕಟೇಶ್ ನಾಯ್ಕ ರೈತರಿಗೆ ಮಾಹಿತಿ ನೀಡಿದರು. ಬಿದರಕೆರೆ ಎಫ್‍ಪಿಒ ಸಿಇಓ ಮನೋಜ್ ಕುಮಾರ್ ವಾರ್ಷಿಕ ವರದಿ ಮಂಡಿಸಿ, ಕಂಪನಿಯು ಪ್ರಸ್ತುತ 61 ಲಕ್ಷ ರೂ. ವ್ಯವಹಾರ ಮಾಡಿರುವುದರ ಬಗ್ಗೆ ಷೇರುದಾರರಿಗೆ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಎಫ್‍ಪಿಒ ಅಧ್ಯಕ್ಷ ಎಂ.ಎಚ್.ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕರಾದ ಎಚ್.ಜಿ.ಉಮಾಪತಿ, ಎನ್.ಎಚ್.ನಾಗರಾಜ್, ಕೆ.ಎಸ್.ರೇವಣಸಿದ್ದಪ್ಪ, ಎಚ್.ಜಿ.ನಾಗರಾಜಪ್ಪ, ಕೆ.ಎಂ. ಕವಿತಾಸ್ವಾಮಿ, ಜಿ.ಎಸ್.ಬಸವನಗೌಡ, ಕೆ.ಕೃಷ್ಣ ಮೂರ್ತಿ ಮತ್ತು ಡಿಇಒ ಎಂ.ತೇಜಸ್ವಿನಿ ಹಾಗೂ ಕಂಪನಿಯ 750 ಜನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Janathavani
Copy link