ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ದೆಹಲಿಗೆ ಪಾದಯಾತ್ರೆ

ದಾವಣಗೆರೆ, ಜ. 23-  ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗರ್ಭಿಣಿ ನೋಂದಣಿ ಕಡ್ಡಾಯಗೊಳಿಸಲು ಒತ್ತಾಯಿಸಿ ಕನ್ಯಾಕುಮಾರಿಯಿಂದ ದೆಹಲಿ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 15 ರಾಜ್ಯಗಳ ಮೂಲಕ 4 ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ. ಜಕ್ಕಾಳಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 20ರಿಂದ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಾರ್ಚ್ 5ಕ್ಕೆ ಕರ್ನಾಟಕ ತಲುಪಲಿದೆ. ಜೂನ್ 4ಕ್ಕೆ ದೆಹಲಿ ತಲುಪಿ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದರು.

ಪೂರ್ವಭಾವಿಯಾಗಿ ಆರುಷಿ ಯೋಜನೆಯ 10 ವರ್ಷಗಳಲ್ಲಿ ನಡೆದು ಬಂದ ದಾರಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ನೀಡಿರುವ ಪತ್ರಗಳು, ಪ್ರಸ್ತುತ ಕಾಯ್ದೆಯ ಹಕ್ಕುಗಳು, ನಿಯಮಗಳ ಉಲ್ಲಂಘನೆಯ ದಾಖಲಾತಿ ಒಳಗೊಂಡ 100 ಪುಟಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. 

ಗರ್ಭಪಾತ ಸಂಪೂರ್ಣ ಗರ್ಭಿಣಿ ಮಹಿಳೆ ಆಯ್ಕೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯಿಂದಾಗಿ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆ ಅಸ್ತಿತ್ವವನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜಾನಾಯ್ಕ  ಹನುಮಸಾಗರ, ರವಿಶಂಕರ್ ಬಿ.ಜಿ. ಬೆನಕನಹಳ್ಳಿ ಉಪಸ್ಥಿತರಿದ್ದರು.