ದಾವಣಗೆರೆ, ಜ. 18 – ನವೋ ದಯ ಕಾಲದಲ್ಲಿದ್ದ ಸಂಪ್ರದಾಯಕ್ಕೆ ಬಂಡಾಯವಾಗಿ ನನ್ನ ಕಾವ್ಯಗಳಲ್ಲಿ ಪೋಲಿತನ ಬಳಸಿದ್ದೆ. ನನ್ನ ಕವಿತೆಗಳಲ್ಲಿ ಕಂಡು ಬರುವ ಲೈಂಗಿಕತೆ ಹಾಗೂ ಪೋಲಿತನ ನವೋದಯಕ್ಕೆ ಷಾಕ್ ನೀಡಿತ್ತು. ಹೀಗಾಗಿ ಪೋಲಿತನ ಅನ್ನುವು ದೂ ಪ್ರತಿಭಟನೆಯಾಗಿದೆ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದ್ದಾರೆ.
ಜಿಲ್ಲಾ ವರದಿಗಾರರ ಕೂಟದಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬಂಡಾಯ ಕವಿಯ ಮೂಲ ಗುಣ. ಕ್ರಾಂತಿಕಾರಿ ಅಲ್ಲದವನು ಕವಿಯೇ ಅಲ್ಲ. ಬೇರೆ ಬೇರೆ ಕಾಲ ಘಟ್ಟದಲ್ಲಿ ಕವಿಗಳು ತಮ್ಮ ಹಿಂದಿನ ಕಾಲಘಟ್ಟದ ವಿರುದ್ಧ ಬಂಡಾ ಯತನ ತೋರಿದ್ದಾರೆ ಎಂದರು.
ಕುವೆಂಪು ಅವರ ಕೃತಿಗಳು ನಿಜ ವಾದ ಬಂಡಾಯದ ಸೂಚಕವಾ ಗಿವೆ. ಆ ಸಮಯದಲ್ಲಿ ಬ್ರಾಹ್ಮಣರು ಚೆನ್ನಾಗಿ ಬರೆಯುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕುವೆಂಪು ಅವರು ನಾನೂ ಸಹ ಸಂಸ್ಕೃತ ಕಲಿಯಬಲ್ಲೆ, ಶ್ರೀ ರಾಮಾ ಯಣ ದರ್ಶನಂ ರೀತಿಯ ಮೇರು ಕೃತಿ ಬರೆಯಬಲ್ಲೆ ಎಂಬುದನ್ನು ತೋರಿಸಿ ದರು. ಹೀಗಾಗಿ ಕುವೆಂಪು ಅವರದ್ದು ಶೂದ್ರ ಬಂಡಾಯ ಎಂದು ವಿಶ್ಲೇಷಿಸಿದರು.
ಜಾತಿ ತಗಾದೆ ಇಂದಿನದಲ್ಲ
ಸಾಹಿತ್ಯದಲ್ಲಿ ಜಾತಿಯ ತಗಾದೆ ಇಂದಿನದಲ್ಲ. ಅಂದು ಪಂಪ ಹಾಗೂ ಕುಮಾರವ್ಯಾಸರ ಕಾಲದಿಂದಲೂ ಇರುವಂತೆ ಕಾಣುತ್ತಿದೆ. ಆದರೆ, ಈಗ ಸಾಮಾಜಿಕ ಮಾಧ್ಯಮಗಳ ಕಾರಣದಿಂದಾಗಿ ಜಾತೀಯತೆ ಬಹಿರಂಗ ವಾಗಿದೆ ಎಂದು ಲಕ್ಷ್ಮಣರಾವ್ ಹೇಳಿದರು.
ಕನಕದಾಸರ ಕಾಲದಲ್ಲೂ ಜಾತೀಯತೆ ಇದ್ದ ಕಾರಣಕ್ಕೆ ಅವರು ಕುಲ ಕುಲ ಎಂದು ಹೊಡೆದಾಡ ಬೇಡಿ ಎಂದು ತಿಳಿಸಿದರು. ಜಾತೀಯತೆ ಸಾಹಿತ್ಯದಲ್ಲಿ ಇದ್ದೇ ಇದೆ ಎಂದವರು ತಿಳಿಸಿದರು. ನಾನು ಪಿ.ಯು.ಸಿ. ಹಂತದಲ್ಲೇ ಜಾತಿ ಹಾಗೂ ಜನಿವಾರ ಎರಡನ್ನೂ ಬಿಟ್ಟಿದ್ದೇನೆ. ನನ್ನ ಕುಟುಂಬದಲ್ಲಿ ಅಂತರ್ಜಾ ತೀಯ, ಅಂತರ ಧರ್ಮೀಯ ಮದುವೆಗಳಾಗಿವೆ. ಆದರೆ, ಅಧಿಕಾರ ದಲ್ಲಿ ರುವವರು ಪ್ರಶಸ್ತಿ ಕೊಡುವಾಗ ಮಾತ್ರ ಜಾತಿ ನೋಡುತ್ತಾರೆ. ಹೀಗಾಗಿ ನನಗೂ ಸಾಕಷ್ಟು ಅನ್ಯಾಯ ಆಗಿದೆ ಎಂದವರು ತಿಳಿಸಿದರು.
ಸರ್ಕಾರಕ್ಕೆ ಸಾಹಿತ್ಯ ಅಲ್ಲ, ನ್ಯಾಯ ಮುಖ್ಯ
ಸಾಹಿತಿಗಳಿಗೆ ಮನ್ನಣೆ ನೀಡುವ ವಿಷಯ ಬಂದಾಗ ಸರ್ಕಾರಕ್ಕೆ ಸಾಹಿತ್ಯ ಮುಖ್ಯ ಅಲ್ಲ, ನ್ಯಾಯ ಮುಖ್ಯ. ಸರ್ಕಾರ ಪ್ರಾದೇಶಿಕ ನ್ಯಾಯ ಸೇರಿದಂತೆ ಎಲ್ಲ ನ್ಯಾಯಗಳನ್ನು ಪರಿಗಣಿಸಿದ ನಂತರ ಕೊನೆಯದಾಗಿ ಸಾಹಿತ್ಯ ನ್ಯಾಯದ ಬಗ್ಗೆ ಯೋಚಿಸುತ್ತದೆ. ಆದರೆ, ಇದು ತಪ್ಪಲ್ಲ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದರು. ಹೀಗಾಗಿಯೇ ನಾನು ಸರ್ಕಾರದಿಂದ ಯಾವುದೇ ಮನ್ನಣೆ ಬಯಸಿಲ್ಲ. ಸರ್ಕಾರ ನನಗೆ ಇದುವರೆಗೂ ಮನ್ನಣೆ ನೀಡದೇ ಇರುವ ಬಗ್ಗೆ ನಿರಾಸೆಯೂ ಇಲ್ಲ ಎಂದವರು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಕವಿತೆ ಬರೆಯುವವರಿಗೆ ಹೆಚ್ಚು ಅವಕಾಶ ಸಿಕ್ಕಿದೆ. ಯಾರ ಹಂಗಿ ಲ್ಲದೇ ಕವಿಗಳು ತಮ್ಮ ಕವನಗಳನ್ನು ಜಾಲತಾಣಗಳಲ್ಲಿ ಪ್ರಕಟಿಸಬಹುದು. ಪ್ರಪಂಚದಾದ್ಯಂತ ತಲುಪಬಹುದು ಎಂದು ಹೇಳಿದರು.
ಆದರೆ, ಈ ರೀತಿಯ ಕವಿತೆಗಳಿಗೆ ವಿಮರ್ಶಕರಿಲ್ಲದಿರುವುದೇ ದೊಡ್ಡ ತೊಡಕಾಗಿದೆ. ಕವಿತೆಗಳಲ್ಲಿರುವ ತಪ್ಪುಗಳನ್ನು ತಿದ್ದುವವರು ಇಲ್ಲದಂತಾಗಿದೆ. ಕವಿತೆ ಬರೆಯುವವರಿಗೂ ವಿಮರ್ಶೆ ತಾಳಿಕೊಳ್ಳುವ ಮನೋಭಾವ ಇಲ್ಲ ಎಂದವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಬದಲಿಗೆ ಪರ್ಯಾಯ ಸಮ್ಮೇಳನ ನಡೆಯುತ್ತಿರುವುದು ಒಳ್ಳೆಯ ಫಲ ನೀಡಬಹುದು. ಪರಿಷತ್ ಒಂದೇ ಜನರ ಪ್ರಾಥಮಿಕ ದನಿ ಅಲ್ಲ. ಇದಕ್ಕೂ ಉತ್ತಮ ಪರ್ಯಾಯ ಸಿಗುವುದಿದ್ದರೆ ಆಗಲಿ ಎಂದು ಲಕ್ಷ್ಮಣರಾವ್ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಕರುಣ ಜೀವ ಕಲ್ಯಾಣ ಟ್ರಸ್ಟ್ ಸ್ಥಾಪಕ ಶಿವನಕೆರೆ ಬಸವಲಿಂಗಪ್ಪ, ಕೂಟದ ಪ್ರಧಾನ ಕಾರ್ಯದರ್ಶಿ ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ, ಉಪಾಧ್ಯಕ್ಷ ರಾ. ರವಿಬಾಬು, ಸಾರ್ವಜನಿಕ ಸಂಪರ್ಕಾಧಿಕಾರಿ ಡಿ. ರಂಗನಾಥರಾವ್ ಮತ್ತಿತರರು ಉಪಸ್ಥಿತರಿದ್ದರು.