ನಡೆಯದ ರೈತರ ಆದಾಯದ ಸಮೀಕ್ಷೆ

ಆದಾಯ ದುಪ್ಪಟ್ಟು ಮಾಡುವ ಯೋಜನೆಗಿನ್ನೂ ಇಲ್ಲ ಸ್ಪಷ್ಟನೆ

ದಾವಣಗೆರೆ, ಜ. 20 – 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಗುರಿ ಹೊಂದಿರುವುದಾಗಿ ಕೇಂದ್ರ ಸರ್ಕಾರ 2016ರಲ್ಲಿ ತಿಳಿಸಿತ್ತು. ಈ ಯೋಜನೆಯ ಅನ್ವಯ ಪಂಚಸೂತ್ರಗಳನ್ನು ರೂಪಿಸಲಾಗಿತ್ತು. ಆದರೆ, ಆರು ವರ್ಷಗಳ ನಂತರ ರೈತರ ಆದಾಯ ದುಪ್ಪಟ್ಟಾಗಿದೆಯೇ? ಎಂಬ ಪ್ರಶ್ನೆ ಒತ್ತಟ್ಟಿಗಿರಲಿ, ರೈತರ ಆದಾಯ ಎಷ್ಟಾಗಿದೆ? ಎಂಬ ಪ್ರಶ್ನೆಗೇ ಉತ್ತರ ಹುಡುಕಬೇಕಿದೆ.

ರೈತರ ಆದಾಯ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಪಂಚ ಸೂತ್ರಗಳೆಂದರೆ : 1. ಕೃಷಿ ಉತ್ಪಾದಕತೆ ಹೆಚ್ಚಿಸುವುದು, 2. ಕೃಷಿ ವೆಚ್ಚ ಇಳಿಕೆ, 3. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ, 4. ಕೃಷಿ ಬೆಳೆಗೆ ಇರುವ ಅಪಾಯಗಳ ಪರಿಣಾಮಕಾರಿ ನಿರ್ವಹಣೆ ಹಾಗೂ 5. ಸುಸ್ಥಿರ ತಂತ್ರಜ್ಞಾನ ಅಳವಡಿಕೆ.

ಕಳೆದ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರಕ್ಕೆ ರೈತರ ಆದಾಯ ಕುರಿತು ಪ್ರಶ್ನಿಸಲಾಗಿತ್ತು. ಆಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್.) ಮೂಲಕ ದೇಶಾದ್ಯಂತ ಇರುವ 75 ಸಾವಿರ ಯಶಸ್ವೀ ರೈತರ ಕುರಿತು ವರದಿ ರೂಪಿಸಿದ ವರದಿಯನ್ನು ಉತ್ತರವಾಗಿ ನೀಡಿದ್ದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರೂಪಿಸಲಾಗಿದ್ದ ಐ.ಸಿ.ಎ.ಆರ್. ವರದಿಯ ಅನ್ವಯ, ಈ 75 ಸಾವಿರ ಯಶಸ್ವೀ ರೈತರ ಆದಾಯ ದುಪ್ಪಟ್ಟಾಗಿದೆ. ‘ಯಶಸ್ವಿಯಾಗದ’ ಉಳಿದ ರೈತರ ಆದಾಯ ಏನೆಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.

ಸರ್ಕಾರದ ಸೂಚನೆಯ ಅನ್ವಯವೇ ನಗರದ ಐ.ಸಿ.ಎ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಹ ಆದಾಯ ದುಪ್ಪಟ್ಟಾಗಿರುವ 110 ಯಶಸ್ವೀ ರೈತರ ಕುರಿತು ವರದಿ ರೂಪಿಸಿತ್ತು. ಆದರೆ, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಈ ವರದಿಯನ್ನು ‘ಸಮೀಕ್ಷೆ’ ಎಂದು ಮಂಡಿಸಿದಾಗ ಸಂಸದ ಜಿ.ಎಂ.ಸಿದ್ದೇಶ್ವರ ತೃಪ್ತರಾಗಲಿಲ್ಲ.  ರೈತರ ಆದಾಯದ ಬಗ್ಗೆ ಸಮಗ್ರ ವರದಿ ರೂಪಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು.

ಕೃಷಿ ಇಲಾಖೆ ಮೂಲಗಳ ಪ್ರಕಾರ, ರೈತರ ಆದಾಯ ಹೆಚ್ಚಳದ ಕುರಿತು ಸಮೀಕ್ಷೆ ನಡೆಸಲು ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಸೂಚನೆಯೇ ಬಂದಿಲ್ಲ, ಇದುವರೆಗೂ ರೈತರ ಆದಾಯ ಕುರಿತ ಯಾವುದೇ ಸಮೀಕ್ಷೆಯೂ ನಡೆದಿಲ್ಲ. ರೈತರ ಆದಾಯ ಕುರಿತ ಸಮಗ್ರ ಅಧ್ಯಯನವೇ ನಡೆಯದಿರುವಾಗ, ಆದಾಯ ದುಪ್ಪಟ್ಟಿನ ಬಗ್ಗೆ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬ ಪ್ರಶ್ನೆಯೂ ಮೂಡುತ್ತಿದೆ.

ರೈತರ ಆದಾಯ ಸಮೀಕ್ಷೆ ನಡೆಸಿಲ್ಲ, ಯಶಸ್ವೀ ರೈತರ ವರದಿ ರೂಪಿಸಲಾಗಿದೆ: ದೇವರಾಜ್

ಐ.ಸಿ.ಎ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಯಶಸ್ವೀ ರೈತರ ವರದಿ ರೂಪಿಸಲಾಗಿದೆಯೇ ವಿನಃ, ಯಾವುದೇ ಸಮೀಕ್ಷೆ ನಡೆಸಿಲ್ಲ ಎಂದು ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆ ಹಾಗೂ ಮಾರ್ಗಸೂಚಿ ಅನ್ವಯ, ಜಿಲ್ಲೆಯ 110 ಯಶಸ್ವೀ ರೈತರ ಬೆಳೆ ಪದ್ಧತಿ ಕುರಿತು ವರದಿ ರೂಪಿಸಲಾಗಿದೆ. ಇದು ಜಿಲ್ಲೆಯ ಎಲ್ಲ ರೈತರ ಆದಾಯಕ್ಕೆ ಸಂಬಂಧಿಸಿ ದ್ದಲ್ಲ ಎಂದವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಆದಾಯ ಹೆಚ್ಚಳಕ್ಕಾಗಿ ಕೃಷಿ ವಿಜ್ಞಾನ ಕೇಂದ್ರ ಕೆಲ ಮಾರ್ಗೋಪಾಯಗಳ ಸಲಹೆ ನೀಡಿದೆ. ಈ ಸಲಹೆ ಅಳವಡಿಸಿಕೊಂಡು ಲಾಭ ಹೆಚ್ಚಿಸಿಕೊಂಡ ರೈತರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದಿದ್ದೇವೆ. 2016-17ರಿಂದ 2020-21ರ ನಡುವೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಹೊಸ ತಳಿಗಳ ಪರಿಚಯ ಸೇರಿದಂತೆ, ಹಲವು ಮಾರ್ಗಗಳ ಮೂಲಕ ಆದಾಯ ಹೆಚ್ಚಿಸಿಕೊಂಡವರ ಅಧ್ಯಯನ ನಡೆಸಲಾಗಿದೆ ಎಂದವರು ತಿಳಿಸಿದರು.

ಈ ವೇಳೆ ಕೆಲ ರೈತರು ನಾನಾ ಕಾರಣಗಳಿಂದ ನಷ್ಟ ಅನುಭವಿಸಿದ್ದೂ ಕಂಡು ಬಂದಿದೆ. ಆದರೆ, ಯಶಸ್ವಿ ರೈತರ ವರದಿ ಇದಾಗಿರುವ ಕಾರಣ, ನಷ್ಟಕ್ಕೀಡಾದವರ ವಿವರ ದಾಖಲಿಸಿಲ್ಲ ಎಂದು ಡಾ. ದೇವರಾಜ್ ಸ್ಪಷ್ಟಪಡಿಸಿದ್ದಾರೆ.

ರೈತರ ಆದಾಯ ಹೆಚ್ಚಿಸಲು  ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ಹಲವಾರು ಸಂಸ್ಥೆಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಈ ಪ್ರಯತ್ನಗಳ ಸಾಧಕ – ಬಾಧಕಗಳನ್ನು ತಿಳಿದು ಸೂಕ್ತ ಕ್ರಮ ತೆಗೆದುಕೊಳ್ಳಲು ವರದಿ ರೂಪಿಸಲಾಗಿದೆ ಎಂದವರು ಹೇಳಿದ್ದಾರೆ.