ಚರಂಡಿಗೆ ಮಗುಚಿ ಬಿದ್ದ ಔಷಧಿ ವಾಹನ

ಹರಿಹರ, ಜ. 20 – ಔಷಧಿ ತೆಗೆದುಕೊಂಡು ಹೋಗುವ ವಾಹನ ನಗರದ ಹಳೆಯ ಪಿ.ಬಿ. ರಸ್ತೆಯ ಗೋಪಾಲ ಕೃಷ್ಣ ಲಾಡ್ಜ್ ಮುಂಭಾಗ ದಲ್ಲಿರುವ ದೊಡ್ಡ ಗಾತ್ರದ ಚರಂಡಿಗೆ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಸುಕಿನಲ್ಲಿ ಔಷಧಿ ತೆಗೆದುಕೊಂಡು ಹೋಗುತ್ತಿದ್ದಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಚಾಲಕ ಬೆಣ್ಣೆ ಸತೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನ ಜಖಂಗೊಂಡಿದೆ. ಹಳೆ ಪಿ.ಬಿ. ರಸ್ತೆ ಅಗಲೀಕರಣಗೊಂಡು ಸುಮಾರು ಆರು ವರ್ಷ ಕಳೆದರೂ ಪಿ.ಬಿ. ರಸ್ತೆಯ ಚರಂಡಿಗಳು ಪೂರ್ಣವಾಗದೆ ಪದೇ ಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.