ಸೂರಗೊಂಡನಕೊಪ್ಪದಲ್ಲಿ ಫೆ.13 ರಿಂದ ಸಂತ ಸೇವಾಲಾಲ್ ಜಾತ್ರಾ ಮಹೋತ್ಸವ

ಸೂರಗೊಂಡನಕೊಪ್ಪದಲ್ಲಿ ಫೆ.13 ರಿಂದ ಸಂತ ಸೇವಾಲಾಲ್ ಜಾತ್ರಾ ಮಹೋತ್ಸವ

ದಾವಣಗೆರೆ, ಜ.24- ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತಿ ಕಾರ್ಯಕ್ರಮ  ಬರುವ ಫೆಬ್ರವರಿ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಸೂರಗೊಂಡನ ಕೊಪ್ಪ ಶ್ರೀ ಕ್ಷೇತ್ರದಲ್ಲಿ  ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಸಿದ್ದತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಿತಿ ಸದಸ್ಯರಿಗೆ ರಾಜ್ಯ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಸೂಚಿಸಿದರು.

ನ್ಯಾಮತಿ ತಾಲ್ಲೂಕು ಸೂರಗೊಂಡನ ಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರದದಲ್ಲಿ ಶನಿವಾರ ಆಯೋಜಿಸಲಾದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೇವಾಲಾಲ್ ಜಯಂತಿ ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾ ದದ್ದಲ್ಲ. ಎಲ್ಲಾ ಜಾತಿ, ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಆಚರಿಸುವ ಜಯಂತಿ ಇದಾಗಿದೆ. ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಪವಿತ್ರತೆಯ ಭಾವನೆಯೊಂದಿಗೆ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರವನ್ನು ನೋಡುತ್ತೇವೆ. ರಾಜ್ಯದ ನಾನಾ ಭಾಗದಿಂದ ಮಾಲಾಧಾರಿಗಳು ಜಯಂತಿಗೆ ಆಗಮಿಸಲಿದ್ದಾರೆ. ದಾವಣಗೆರೆ ಸೇರಿದಂತೆ ವಿವಿಧೆಡೆ ಅವರಿಗೆ ತಾತ್ಕಾಲಿಕ ವಿಶ್ರಾಂತಿ ತಾಣಗಳ ವ್ಯವಸ್ಥೆ ಮಾಡಬೇಕು. ಭಕ್ತಾದಿಗಳು, ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ಶೌಚಾಲಯ, ಕುಡಿಯುವ ನೀರು.ಊಟದ ವ್ಯವಸ್ಥೆ, ಆಸನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ. ಸೂಕ್ತ ರಕ್ಷಣಾ ವ್ಯವಸ್ಥೆ ಒಳಗೊಂಡಂತೆ ಮೂಲ ಸೌಕರ್ಯಗಳ ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ನಾಡಿನ ಹಲವು ಭಾಗಗಳಿಂದ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಉತ್ಸವ ದಿನಗಳಂದು ಹೊನ್ನಾಳಿ, ಹರಿಹರ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಸವಳಂಗ ಮುಂತಾದ ಕಡೆಗಳಿಂದ ಕೆಎಸ್‍ಆರ್‍ಟಿಸಿಯವರು ವಿಶೇಷ ಬಸ್ ವ್ಯವಸ್ಥೆ ಮಾಡಬೇಕು.  

ಜಾತ್ರೆಯ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕು.  ಹೆಚ್ಚು ಜನ ಸೇರುವುದರಿಂದ ಪರಿಸರ ಸ್ವಚ್ಛತೆ, ಶೌಚಾಲಯ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು.  ಕ್ಷೇತ್ರದಲ್ಲಿ ಸ್ವಚ್ಛತೆಗಾಗಿಯೇ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು.  ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ಗುರುತಿಸಿ ಸಿದ್ಧಪಡಿಸಬೇಕು. ಸಮರ್ಪಕ ಕುಡಿ ಯುವ ನೀರು ಪೂರೈಕೆಗಾಗಿ ಟ್ಯಾಂಕರ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಅವರು ಮಾತನಾಡಿ, ಸೂರಗೊಂಡನ ಕೊಪ್ಪ ಕ್ಷೇತ್ರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ. ಪಕ್ಷ ,ಧರ್ಮ ಜಾತಿ ರಹಿತವಾಗಿ ಎಲ್ಲ ಉತ್ಸವದ ಯಶ್ಸಸ್ಸಿಗೆ ಶ್ರಮಿಸ ಬೇಕು ಅಗತ್ಯ ಮೂಲಸೌಲಭ್ಯಗಳ ಜೊತೆಗೆ ಸಿದ್ದತೆ ನಡೆಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತಾನಾಡಿ, ಸೇವಾಲಾಲ್‌ ಅವರ ಜಯಂತಿ ಕಾರ್ಯಕ್ರಮಕ್ಕೆ ಅಚ್ಚುಕಟ್ಚಾಗಿ ವ್ಯವಸ್ಥೆ ಮಾಡಲಾಗವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ತಾಂಡಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ ನಾಯಕ್, ಅಡಿಷನಲ್ಲಿ ಡಿವೈಎಸ್‍ಪಿ ಆರ್.ಜಿ.ಬಸರಗಿ, ಜಿ.ಪಂ ಸಿಇಓ ಡಾ. ಎ ಚೆನ್ನಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಹೊನ್ನಾಳಿ ತಹಶೀಲ್ದಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.