ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಸಮಾಜಕ್ಕೆ ಆಸರೆ

ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಸಮಾಜಕ್ಕೆ ಆಸರೆ

ಹರಿಹರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಗಮಣಿ ಶಾಸ್ತ್ರಿ

ಹರಿಹರ, ಜ. 23 – ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ ಅವರು ಮುಂದಿನ ದಿನಗಳಲ್ಲಿ ಮನೆಗೆ ಮತ್ತು ಸಮಾಜಕ್ಕೆ ಆಸರೆಯಾಗಿ ನಿಲ್ಲುತ್ತಾರೆ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಹೇಳಿದರು.

ನಗರದ ತಿಪ್ಪೇರುದ್ರಸ್ವಾಮಿ ಸ್ವಾಮಿ ಪ್ರೌಢ ಶಾಲಾ ಸಭಾಂಗಣದಲ್ಲಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತು, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆದ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಂಗನವಾಡಿ ಮಕ್ಕಳಿಗೆ ಪ್ರಗತಿ ಪತ್ರ ವಿತರಣೆ ಸಮಾರಂಭದ ಆಶಯ ನುಡಿಯಲ್ಲಿ ಅವರು ಮಾತನಾಡಿದರು. 

ತಾಯಿ ತಾನು ಎಷ್ಟೇ ಅವಿದ್ಯಾವಂತಳಾದರೂ ಸಹ ಸಮಾಜದ ಬೆಳವಣಿಗೆಗೆ ಉತ್ತಮ ಮಕ್ಕಳ ಕೊಡುಗೆಯನ್ನು ನೀಡುತ್ತಾಳೆ. ತಾಯಿ ಹೇಳಿಕೊಡುವ ವಿದ್ಯೆ ಅನೌಪಚಾರಿಕವಾಗಿದ್ದರೂ, ಅದು ಮಗುವಿನ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗುತ್ತದೆ ಎಂದವರು ಹೇಳಿದರು.

ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಕಲೆಗಳು ಇವೆ. ಅವುಗಳನ್ನು ಬೆಳಕಿಗೆ ತರುವ ಕೆಲಸ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಟಿವಿ, ಮೊಬೈಲ್ ನೋಡುವುದು ಅಧಿಕವಾಗಿ ಕಲೆ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.

ಬಿಇಓ ಹನುಮಂತಪ್ಪ ಮಾತನಾಡಿ, ಮಕ್ಕಳಿಗೆ ಬಾಲ್ಯದ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿದರೆ, ನಾಡು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ಟಪ್ಪ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಫ್ರಾನ್ಸಿಸ್ ಕ್ಸೇವಿಯರ್ , ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ಎಂ.ಚಿದಾನಂದ ಕಂಚಿಕೇರಿ, ಸಾಹಿತಿ ಸುಬ್ರಹ್ಮಣ್ಯ ನಾಡಿಗೇರ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕೆ.ಟಿ.ಗೀತಾ, ಕೊಂಡಜ್ಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್ ಮಾತನಾಡಿದರು.