ನ್ಯಾ.ಸದಾಶಿವ ಆಯೋಗ‌ ಜಾರಿಗಾಗಿ ಆಗ್ರಹಿಸಿ ತಮಟೆ ಚಳವಳಿ

ನ್ಯಾ.ಸದಾಶಿವ ಆಯೋಗ‌ ಜಾರಿಗಾಗಿ ಆಗ್ರಹಿಸಿ ತಮಟೆ ಚಳವಳಿ

ಜಗಳೂರು, ಜ.10- ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಒತ್ತಾಯಿಸಿ ತಾಲ್ಲೂಕು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ತಮಟೆ ಚಳವಳಿ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಮಾದಿಗ ಹಾಗೂ ಛಲವಾದಿ ಸಮಾಜದ ಪ್ರತಿಭಟನಾ ಕಾರರು ಒಳಮೀಸಲಾತಿಗೆ ಆಗ್ರಹಿಸಿ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ದಲಿತ ಸಂಘಟನೆ ಹಿರಿಯ ಮುಖಂಡ ಶಂಭುಲಿಂಗಪ್ಪ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊ ಳಿಸಲು ಸುಮಾರು 2 ದಶಕಗಳಿಂದ ಸತತ ವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ.ಇದುವರೆಗೂ ಅಧಿಕಾರ ನಡೆಸಿದ ಯಾವುದೇ ಸರ್ಕಾರಗಳು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಲ್ಲಿ ನಿರ್ಲಕ್ಷಿಸಿವೆ ಎಂದು ಕಿಡಿಕಾರಿದರು.

ಛಲವಾದಿ ಸಮಾಜದ ಹಿರಿಯ ಮುಖಂಡ ನಿವೃತ್ತ ಅಧಿಕಾರಿ, ಸಿ.ತಿಪ್ಪೇಸ್ವಾಮಿ ಮಾತನಾಡಿ,  ಹೊಲೆಯ, ಮಾದಿಗ ಸಮಾಜಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಶೋಷಣೆಗೆ ಒಳಗಾಗಿವೆ. ನಾವು ಸ್ಪೃಶ್ಯ ಜಾತಿಗಳಾದ ಕೊರಚ, ಲಂಬಾಣಿ, ಭೋವಿ ಸಮುದಾಯಗಳ ಮೀಸಲಾತಿ ಕಸಿದುಕೊಳ್ಳುವುದಿಲ್ಲ, ನಾವೂ ಅವರಂತೆ‌ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಿಜವಾದ ಅಸ್ಪೃಶ್ಯರಿಗೆ ಒಳಮೀಸಲಾತಿ ಸಿಗಬೇಕು.ಮೀಸಲಾತಿ ಎಂದರೆ ವಕ್ರದೃಷ್ಟಿಯಿಂದ ಕಾಣುವವರು ಇದೀಗ ಮೀಸಲಾತಿ ಕೇಳುತ್ತಿರುವುದು ನಾಚಿಕೆಗೇಡಿತನ ಎಂದರು.

ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ತಾಲ್ಲೂಕು ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಪಲ್ಲಾಗಟ್ಟೆಶೇಖರಪ್ಪ, ಸಿ.ಲಕ್ಷ್ಮಣ, ನಾಗಲಿಂಗಪ್ಪ, ಓಬಣ್ಣ, ಕುಬೇರಪ್ಪ, ಸಿ ದ್ದಮ್ಮನಹಳ್ಳಿ ವೆಂಕಟೇಶ್, ಕುಬೇಂದ್ರಪ್ಪ, ಹೊನ್ನೂರಪ್ಪ, ನಿಜಲಿಂಗಪ್ಪ,  ಪೂಜಾರ್ ಸಿದ್ದಪ್ಪ, ಮಲ್ಲೇಶ್ ಪೂಜಾರ್, ವೀರಸ್ವಾಮಿ, ಸತೀಶ್ ,ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್, ತಿಮ್ಮೇಶ್, ಮಹಾಂತೇಶ್ ಮುಂತಾದವರು ಭಾಗವಹಿಸಿದ್ದರು.