ಜಿಲ್ಲಾ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಯೋಧ ಸುಭಾಷ್‌ ಚಂದ್ರ ಬೋಸ್ ಜನ್ಮ ದಿನಾಚರಣೆ

ಜಿಲ್ಲಾ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಯೋಧ ಸುಭಾಷ್‌ ಚಂದ್ರ ಬೋಸ್ ಜನ್ಮ ದಿನಾಚರಣೆ

ದಾವಣಗೆರೆ, ಜ.24- ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರು ಮಹಾತ್ಮ ಗಾಂಧೀಜಿಯವರ ಬಹು ದೊಡ್ಡ ಅಭಿಮಾನಿ ಯಾಗಿದ್ದರು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಶ್ರೀಮತಿ ಗೀತಾ ಪ್ರಶಾಂತ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ವತಿ ಯಿಂದ ನಿನ್ನೆ ನಡೆದ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ನೇತಾಜಿ ಅವರ ಮಧ್ಯೆ ಹಲವರು ಭಿನ್ನಾಭಿಪ್ರಾಯಗಳನ್ನು ತಂದರೂ ಸಹ, ಅವರಿಬ್ಬರ ಮಧ್ಯೆ ಸಾಕಷ್ಟು ಸಾಮ್ಯತೆ ಇತ್ತು. ಯಾರು ಏನೇ ಹೇಳಿದರೂ ಸಹ ಮೃದು ಧೋರಣೆ ಹೊಂದಿದ್ದರು. ನೇತಾಜಿ ಅವರ ಬಗ್ಗೆ ನೆಹರೂಜಿ ಅವರೂ ಸಹ ಉತ್ತಮ ಅಭಿಪ್ರಾಯ ಹೊಂದಿದ್ದು, ಅನೇಕ ಸಾರಿ ಇದನ್ನು ಬಹಿರಂಗಪಡಿಸಿದ್ದಾರೆ ಎಂದು ಉದಾಹರಣೆ ಸಮೇತ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಇಡೀ ದೇಶದಾದ್ಯಂತ ಪಕ್ಷವನ್ನು ಸಂಘಟಿಸಿ, ಆ ಮೂಲಕ ಬ್ರಿಟಿಷರ ವಿರುದ್ಧ ಜಾತ್ಯತೀತವಾಗಿ ಹೋರಾಟ ನಡೆಸಲು ಪ್ರೇರೇಪಿಸಿದರು ಎಂದರು.

ಪ್ರತ್ಯೇಕ ಸೈನ್ಯವನ್ನು, ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ, ತಾವೇ ಸೈನಿಕರನ್ನು ನೇಮಕ ಮಾಡಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸೀಮಿತವಾಗದೆ, ದೇಶದಲ್ಲಿ ಕೋಮು ಗಲಭೆ ನಡೆದರೆ, ಅದನ್ನು ತಹಬಂದಿಗೆ ತರಲು ಶ್ರಮಿಸಿದರು ಎಂದರು.

ಮತ್ತೋರ್ವ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ನೇತಾಜಿ ಅವರಿಗೆ ಆರಂಭದಲ್ಲಿ ಹಲವಾರು ಟೀಕೆ ಗಳು ಬಂದರೂ ಸಹ ಕಾಂಗ್ರೆಸ್ ಜೊತೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದಿದ್ದನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಮುಖಂಡರುಗಳಾದ ನಾಗರಾಜ್ ಗೌಡ, ದೇವರಹಟ್ಟಿ ಸಮೀವುಲ್ಲಾ, ಸತೀಶ್ ಶೆಟ್ಟರು, ಅಲೆಕ್ಸಾಂಡರ್ (ಜಾನ್) ಪರಶುರಾಮ್, ದೇವ  ಹಾಗೂ ಮತ್ತಿತರರಿದ್ದರು.