ಜಗಳೂರು ಪ.ಪಂ ವಿಶೇಷ ಅನುದಾನಕ್ಕಾಗಿ ನಿಯೋಗ

ಜಗಳೂರು ಪ.ಪಂ ವಿಶೇಷ ಅನುದಾನಕ್ಕಾಗಿ ನಿಯೋಗ

ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸುವಂತೆ ಶಾಸಕ ಎಸ್.ವಿ.ರಾಮಚಂದ್ರ ಕರೆ

ಜಗಳೂರು, ಜ.9- ಪಟ್ಟಣ ಪಂ ಚಾಯ್ತಿ ವ್ಯಾಪ್ತಿಯಲ್ಲಿ ಸಂಪನ್ಮೂಲಗಳ ಕ್ರೋಢೀಕರಣ ವಾಗದ ಕಾರಣ ವಾರ್ಡ್ ಗಳ ಸಮಗ್ರ ಅಭಿವೃದ್ದಿ ಕುಂಠಿತವಾಗಿದೆ. ವಿಶೇಷ ಅನುದಾನಕ್ಕಾಗಿ ಜನವರಿ 19 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಳಿ ಸರ್ವ ಸದಸ್ಯರ ನಿಯೋಗ ತೆರಳಿದ್ದು, ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಕರೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು‌.

ಪಟ್ಟಣದಲ್ಲಿ ಕರ ವಸೂಲಿ ಸಮರ್ಪಕ ವಾಗಿ ಸಂಗ್ರಹವಾಗುವುದಿಲ್ಲ. ನಗರೋತ್ಥಾನ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಬೃಹತ್ ಮಟ್ಟದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕೆಲ ಕಾಮಗಾರಿಗಳು  ಟೆಂಡರ್ ಆಗಿವೆ. ಲಭ್ಯವಿರುವ ಹಣವನ್ನು ಮೂಲ ಸೌಕರ್ಯಗಳಿಗೆ ಬಳಕೆ ಮಾಡಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ನನ್ನ ಆಡಳಿತಾವಧಿಯಲ್ಲಿ ಪಟ್ಟಣದ ದ್ವಿಮುಖ ರಸ್ತೆ, ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಉಳಿದಂತೆ ಜಗಳೂರು-ದೊಣ್ಣೆಹಳ್ಳಿ ಮಾರ್ಗ ದ್ವಿಪಥ ರಸ್ತೆ ನಿರ್ಮಾಣ ಮಾಡಿ ಸೌಂದರ್ಯಗೊಳಿಸುವೆ ಎಂದು ಭರವಸೆ ನೀಡಿದರು.

ಪಟ್ಟಣಕ್ಕೆ ಶೀಘ್ರ ತುಂಗಭದ್ರಾ ನೀರು : ಶಾಂತಿ ಸಾಗರ ನೀರು ಪೈಪ್ ಲೈನ್ ಒಡೆದು ಪಟ್ಟಣಕ್ಕೆ ನೀರು ತರಲು ಪೈಪ್ ಲೈನ್ ದುರಸ್ಥಿಗೆ ಅನಗತ್ಯ ವೆಚ್ಚ ಬೇಡ. ಶೀಘ್ರವೇ ಜಗಳೂರು ಕೆರೆಗೆ ತುಂಗಭದ್ರಾ ನೀರು ಹರಿದು ಬರಲಿದ್ದು. 3 ಕೋಟಿ ರೂ. ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಬೇಕು ಎಂದು  ಶಾಸಕರು ತಿಳಿಸಿದರು.

ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆಗೊಂಡ ನಿರ್ಣಯಗಳು ಯಾವುದೂ ಈಡೇರಿಲ್ಲ. ಶೌಚಾಲಯ, ಚರಂಡಿ ಸ್ವಚ್ಛತೆ, ಬೀದಿ ದೀಪ ನಿರ್ವಹಣೆ ಮಾಡಿಲ್ಲ, ಮುಕ್ತಿವಾಹನದ ಸೌಲಭ್ಯ ಕಲ್ಪಿಸಿಲ್ಲ. ಅಂಗನವಾಡಿ ಕೇಂದ್ರಕ್ಕೆ ನಿವೇಶನ ನೀಡಿಲ್ಲ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ.ಪಂ  ಸದಸ್ಯರಾದ  ಮಂಜಮ್ಮ, ಲಲಿತಮ್ಮ, ದೇವರಾಜ್, ರವಿಕುಮಾರ್ ತರಾಟೆಗೆ ತೆಗದುಕೊಂಡರು.

ಪಟ್ಟಣದಲ್ಲಿ ವಾಹನದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಗ್ನಲ್ ಅಳವಡಿಸಬೇಕು. ಬಯಲು ರಂಗ ಮಂದಿರದ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಪ.ಪಂ ಸದಸ್ಯ ಆರ್.ತಿಪ್ಪೇಸ್ವಾಮಿ ತಿಳಿಸಿದರು.

4 ವರ್ಷಗಳ ಹಿಂದೆ ತಲಾ 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ  4 ಟ್ಯಾಂಕರ್ ಗಳು ಸ್ಥಗಿತವಾಗಿವೆ. ನೀರು ಸರಬರಾಜು ಮಾಡಿಲ್ಲ ಟ್ಯಾಂಕ್‌ಗಳು ಹಾಳಾಗುತ್ತಿವೆ ಎಂದು ಸದಸ್ಯ ರಮೇಶ್ ರೆಡ್ಡಿ ಆಕ್ಷೇಪಿಸಿದರು.

ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳನ್ನು ಮರುಹರಾಜು ಮಾಡಿ ಪಂಚಾಯತಿಗೆ ಹೆಚ್ಚಿನ ಆದಾಯ ಕ್ರೋಢೀಕರಿಸಲು ಸಭೆ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಸದಸ್ಯರಾದ ನವೀನ್ ಕುಮಾರ್, ಪಾಪಲಿಂಗಪ್ಪ, ಲೋಲಾಕ್ಷಮ್ಮ, ಲುಕ್ಮಾನ್ ಖಾನ್, ಲಲಿತಮ್ಮ, ಶಕೀಲ್ ಅಹಮದ್, ನಾಮನಿರ್ದೇಶನ ಸದಸ್ಯರಾದ ಬಿ.ಪಿ.ಸುಭಾನ್, ಗಿರೀಶ್, ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಇಂಜಿನಿಯರ್ ಶೃತಿ  ಉಪಸ್ಥಿತರಿದ್ದರು.