ಜಗಳೂರು ಕ್ಷೇತ್ರಾಭಿವೃದ್ಧಿಗೆ ಮೂರು ಶಾಶ್ವತ ನೀರಾವರಿ ಯೋಜನೆ

ಜಗಳೂರು ಕ್ಷೇತ್ರಾಭಿವೃದ್ಧಿಗೆ ಮೂರು ಶಾಶ್ವತ ನೀರಾವರಿ ಯೋಜನೆ

ವಿಧಾನಸಭಾ ಚುನಾವಣೆ ಪರೀಕ್ಷೆಯನ್ನು ಬರೆಯಲು ಸನ್ನದ್ಧನಾಗಿರುವೆ, ಕ್ಷೇತ್ರದ ಜನತೆ ಪಾರದರ್ಶಕವಾಗಿ  ನನ್ನ ಕೆಲಸಗಳ ಮೌಲ್ಯಮಾಪನ ಮಾಡಿ, ಹೆಚ್ಚು ಅಂಕ ನೀಡಿ ನಾಲ್ಕನೇ ಬಾರಿಗೆ ಪಾಸು ಮಾಡಬೇಕು : ಶಾಸಕ ಎಸ್‌ವಿಆರ್

ಜಗಳೂರು, ಜ.16- ನನ್ನ ಆಡಳಿತಾವಧಿಯಲ್ಲಿನ ಕ್ಷೇತ್ರದ ಅಭಿವೃದ್ಧಿ ಪರ್ವ ತುಲನೆ ಮಾಡಿ, ಮುಂದಿನ ವಿಧಾನಸಭಾ ಚುನಾವಣೆ `ಪರೀಕ್ಷೆಯಲ್ಲಿ’ ಹೆಚ್ಚು ಅಂಕ ನೀಡಿ, ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಸಹಕರಿಸಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ವಿನಮ್ರವಾಗಿ ಮನವಿ ಮಾಡಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಶಾಸಕ ಎಸ್.ವಿ.ಆರ್. ಅಭಿಮಾನಿ ಬಳಗ ಮತ್ತು ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ಜನರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ಕ್ಷೇತ್ರದ ಜನರ ಜೊತೆ ಬಾಂಧವ್ಯ ಹಾಗು ಅವರ ಅಭಿಮಾನಕ್ಕೆ ನಾನು ಋಣಿಯಾಗಿರುವೆ. ಅವರ ವಿಶ್ವಾಸಕ್ಕೆ ದಕ್ಕೆ ಬರದಂತೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನೀರಿಲ್ಲದ ಬರದ ನಾಡಿಗೆ ಹೆಣ್ಣು ಕೊಡುತ್ತಿರಲಿಲ್ಲ, ಇದೀಗ ಅಡಿಕೆ ನಾಡಾಗುವ ಕಾಲ ಸನ್ನಿಹಿತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಸಿದ್ದೇಶ್ವರ ಅವರ ಸಹಕಾರ ದಿಂದ  ಮೂರು ಶಾಶ್ವತ ನೀರಾವರಿ ಯೋಜನೆಗಳನ್ನು  ನನ್ನ ಅಧಿಕಾರ ಅವಧಿಯಲ್ಲಿ ಜಾರಿಗೊಳಿಸಿರುವೆ.

ಭದ್ರಾ ಮೇಲ್ದಂಡೆ ಯೋಜನೆಗೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಿಂಗಳ ಅಂತ್ಯಕ್ಕೆ 57 ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ಭರ್ತಿಯಾಗಲಿವೆ ಮತ್ತು ಸಂತೆಮುದ್ದಾಪುರ ಇತರೆ 146 ಹಳ್ಳಿಗಳಿಗೆ 426 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಮಂಜೂರಾತಿಯಾಗಿದೆ.

ಹೊನಲು ಬೆಳಕಿನ ಕಬಡ್ಡಿ ಆಯೋಜಿಸಿರುವೆ.ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಬೇಕು. ಕೆಲವೇ ತಿಂಗಳಲ್ಲಿ `ಚುನಾವಣೆ ಕಬಡ್ಡಿ’ ಪಂದ್ಯಾವಳಿ ಆರಂಭವಾಗಲಿದೆ, ಹೆಚ್ಚು ಅಂಕ ನೀಡಬೇಕು. ನಾಲ್ಕನೇ ಬಾರಿ ಶಾಸಕನಾಗಿ`ರಾಷ್ಟ್ರೀಯ ಮಟ್ಟದ ಕಬಡ್ಡಿ’ ಪಂದ್ಯಾವಳಿ ಆಯೋಜಿಸುವೆ ಎಂದು ರಾಮಚಂದ್ರ ತಿಳಿಸಿದರು.

ವಿಧಾನಸಭಾ ಚುನಾವಣೆ ಪರೀಕ್ಷೆಯನ್ನು ಬರೆಯಲು ಸನ್ನದ್ಧನಾಗಿರುವೆ, ಕ್ಷೇತ್ರದ ಜನತೆ  ಪಾರದರ್ಶಕವಾಗಿ  ನನ್ನ ಕೆಲಸಗಳ ಮೌಲ್ಯಮಾಪನ ಮಾಡಿ ಹೆಚ್ಚು ಅಂಕ ನೀಡಿ ಪಾಸು ಮಾಡಬೇಕು ಎಂದು ಅವರು ಮನವಿ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಸಾಕಷ್ಟು ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸಿರುವೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಶುಭ ಕೋರಿ  ಮಾತನಾಡಿ, ಶಾಸಕ ಎಸ್.ವಿ.ರಾಮಚಂದ್ರ ಕಾಮಧೇನು ವಿದ್ದಂತೆ. ಎಷ್ಟೇ ಹಾಲು ಕರೆದರೂ ಹಿಂದೆ ಒದೆಯಲ್ಲ, ಮುಂದೆ ಹಾಯೋಲ್ಲ, ಕ್ಷೇತ್ರದ ಸಮಗ್ರ  ಅಭಿವೃದ್ಧಿಗೆ ಶ್ರಮಿಸಲು ಮುಂದಿನ ಚುನಾವಣೆಯಲ್ಲಿ  ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಅಭಿಮಾನಿಗಳು, ಕಾರ್ಯಕರ್ತರು,  ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಿ, ಸನ್ಮಾನಿಸಿ,  ಶಾಸಕರಿಗೆ  ಭರಪೂರ ಶುಭ ಕೋರಿದರು. ಗಂಧರ್ವ ಇವೆಂಟ್ಸ್‌ನಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

ಸಮಾರಂಭದಲ್ಲಿ ಬಿಜೆಪಿ ಮಂಡಲದ  ಪಲ್ಲಾಗಟ್ಟೆ ಮಹೇಶ್, ಶ್ರೀಮತಿ ಇಂದಿರಾ ರಾಮಚಂದ್ರ, ಅಜಯೇಂದ್ರ ಸಿಂಹ, ಪ.ಪಂ‌ ಅಧ್ಯಕ್ಷೆ ವಿಶಾಲಾಕ್ಷಿ, ಓಬಳೇಶ್, ಉಪಾಧ್ಯಕ್ಷೆ ನಿರ್ಮಲ, ಜಿಪಂ ಮಾಜಿ ಅಧ್ಯಕ್ಷೆ ಶಾಂತಕುಮಾರಿ, ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಿಮಹೇಶ್, ಮಾಜಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ನಾಗರಾಜ್  ಮುಖಂಡರಾದ ಶಿವಕುಮಾರ್ ಸ್ವಾಮಿ, ಡಿ.ವಿ.ನಾಗಪ್ಪ, ದ್ಯಾಮನಗೌಡ, ಸಿದ್ದಪ್ಪ, ಆರ್, ತಿಪ್ಪೇಸ್ವಾಮಿ, ಪ‌.ಪಂ ನಾಮನಿರ್ದೇಶನ ಸದಸ್ಯರಾದ ಬಿ.ಪಿ.ಸುಭಾನ್, ರುದ್ರಮುನಿ, ಗಡಿಮಾಕುಂಟೆ ಸಿದ್ದೇಶ್, ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಬಾಲೇನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ್ ಸೇರಿದಂತೆ, ಪಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.