ಆರೋಗ್ಯವಂತ ಶಿಶು ಪ್ರದರ್ಶನ

ಆರೋಗ್ಯವಂತ ಶಿಶು ಪ್ರದರ್ಶನ

ಮಗುವಿಗೆ ಜನನದಿಂದ ಆರು ತಿಂಗಳವರೆಗೆ ಎದೆಹಾಲು ಮಾತ್ರ ನೀಡಬೇಕು

ಹರಿಹರ, ಜ.24- ಮಗುವಿನ ಜನನದಿಂದ ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡ ಬೇಕು. ಆರು ತಿಂಗಳ ನಂತರ ಪೂರಕ ಆಹಾರ ವನ್ನು ಪ್ರಾರಂಭಿಸಬೇಕು ಎಂದು ಕ್ಷೇತ್ರದ ಆರೋಗ್ಯ ಶಿಕ್ಷಣಾಧಿ ಕಾರಿ ನಾಗರಾಜ್ ಅವರು ಹೇಳಿದರು.

ಹರಿಹರ ತಾಲ್ಲೂಕಿನ ಕೆ.ಬೇವಿನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ಇಂದು ಏರ್ಪಾಡಾಗಿದ್ದ`ಆರೋಗ್ಯವಂತ ಶಿಶು ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮಗುವಿಗೆ ಪೂರಕ ಆಹಾರ ಸಿದ್ಧಪಡಿಸುವಿಕೆ ಹಾಗೂ ಮಕ್ಕಳ ಅಪೌಷ್ಟಿಕತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಎಲ್ಲಾ ದ್ವಿದಳ ಧಾನ್ಯಗಳನ್ನು ನೆನೆಸಿ  ನೆರಳಿನಲ್ಲಿ ಒಣಗಿಸಿ, ಹಿಟ್ಟು ತಯಾರಿಸಿ ಸರಿಯಾದ ಪ್ರಮಾಣದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಬೆರೆಸಿ ಮಾಲ್ಟನ್ನು (ದ್ರವರೂಪದಲ್ಲಿ) ಸಿದ್ಧಪಡಿಸಿ ಮಗುವಿಗೆ ಉಣಬಡಿಸಿದಲ್ಲಿ ಮಕ್ಕಳ ಅತ್ಯುತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ವೈದ್ಯಾಧಿಕಾರಿ ಡಾ. ರೇವತಿ ಮಾತನಾಡಿ, ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕು. ಎಲ್ಲ ಮಕ್ಕಳಿಗೂ ತಪ್ಪದೇ ಲಸಿಕೆಯನ್ನು ಹಾಕಿಸಲು ಮನವಿ ಮಾಡಿಕೊಂಡರು. ಆರು ತಿಂಗಳು ಪೂರೈಸಿದ ಮಕ್ಕಳಿಗೆ ದ್ರವರೂಪದ ಆಹಾರ ನೀಡಿ. ತದ ನಂತರ ಬೇಳೆ, ಹಸಿರು ಸೊಪ್ಪಿನಿಂದ ಕೂಡಿದ ಮೃದುವಾದ ಆಹಾರವನ್ನು ತಯಾರಿಸಿ ಮಗುವಿಗೆ ನೀಡಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಮಲ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.